ಕೊಡಗು : ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಪೋಲಿಸ್ ಇಲಾಖೆಯಿಂದ ಹೈ ಆಲರ್ಟ್ ವ್ಯವಸ್ಥೆ ಮಾಡಲಾಗಿದ್ದು, ಕೊಡಗು ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ನೋಡಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್ ಹೇಳಿದರು. ಸೂಕ್ಷ್ಮ 12 ಬೂತ್ಗಳು, 12 ಅತಿಸೂಕ್ಷ್ಮ ಬೂತ್ಗಳು, 12 ನಕ್ಸಲ್ ಸಂಚಾರ ವಲಯ ಬೂತ್ಗಳನ್ನು ಗುರುತು ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.
ಎಂಸಿಸಿ ಇಬ್ಬರು ನೋಡಲ್ ಅಧಿಕಾರಿಗಳು, 41 ಸೆಕ್ಟರ್ ಅಧಿಕಾರಿಗಳು, 14 ಫ್ಲೈಯಿಂಗ್ ಸ್ಕ್ವಾಡ್, 42 ಸ್ಟಾಟಿಕ್ ಸರ್ವೆಲೆನ್ಸ್ ತಂಡ ರಚಿಸಲಾಗಿದ್ದು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. 1500 ಕಾನ್ಸ್‌ಟೇಬಲ್ ಸಿಬ್ಬಂದಿ, 1000 ಸಿವಿಲ್ ಸಿಬ್ಬಂದಿ, ಸಿಸಿಎಫ್ ಫೋರ್ಸ್, ಕೆಎಸ್ಆರ್ಪಿ, ಸ್ರೈಕಿಂಗ್ ಫೋರ್ಸ್, 130 ಹೋಂಗಾರ್ಡ್, ಆರಣ್ಯ ಇಲಾಖೆ ಅಧಿಕಾರಿಗಳು, 3 ಡಿವೈಎಸ್ಪಿ, 25 ಇನ್ಸ್ಪೆಕ್ಟರ್ಗಳನ್ನು ಜಿಲ್ಲೆಯಲ್ಲಿ ನಿಯೋಜನೆ ಮಾಡಲಾಗಿದ್ದು, ಜಿಲ್ಲೆಯ ಒಳಗೆ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಈಗಾಗಲೇ ಗೂಂಡಾಕಾಯ್ದೆ ಅಡಿಯಲ್ಲಿ ರೌಡಿಶೀಟರ್ಗಳನ್ನು ಗಡಿ ಪಾರು ಮಾಡಲಾಗಿದೆ ಎಸ್ಪಿ ರಾಮರಾಜನ್ ಮಾಹಿತಿ ನೀಡಿದರು.
ಇನ್ನು ಜಿಲ್ಲೆಗೆ ಹೊಂದಿಕೊಂಡಿರುವ ಗಡಿಭಾಗಗಳಾದ ಕುಟ್ಟ, ಮಾಕುಟ್ಟ, ಕರಿಕೆ ಸೇರಿ 3 ಅಂತರ ರಾಜ್ಯ ಚೆಕ್‍ಪೋಸ್ಟ್, ಅಂತರ್ ಜಿಲ್ಲೆಯ 11 ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಈ ಚೆಕ್ಪೋಸ್ಟ್ಗಳಲ್ಲಿ ದಿನದ 24 ಗಂಟೆ ಕೂಡ ಚೆಕ್ ಪೋಸ್ಟ್ಗಳಲ್ಲಿ ನಿರಂತರ ತಪಾಸಣೆ ನಡೆಯುತ್ತಿದೆ. ಈ ವೇಳೆ ವಿಡಿಯೋ ಚಿತ್ರೀಕರಣಕ್ಕಾಗಿ ಸಿಸಿ ಕ್ಯಾಮರಗಳನ್ನು ಅಳವಡಿಕೆ ಮಾಡಲಾಗಿದೆ ಎಂದು ಎಸ್ಪಿ ರಾಮರಾಜನ್ ಹೇಳಿದರು.
ಕೊಡಗು ಜಿಲ್ಲಾಧಿಕಾರಿ ಪ್ರತಿಕ್ರಿಯೆ : ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಿದ್ದು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಮತ್ತು ಮಡಿಕೇರಿ ಪೇಟೆ ವಿಧಾನ ಕ್ಷೇತ್ರಗಳಿವೆ. ಜಿಲ್ಲೆಯಲ್ಲಿ ಒಟ್ಟು 4,56,313 ಮತದಾರರಿದ್ದು, 4,51,216 ಸಾಮಾನ್ಯ ಮತದಾರರು ಮತ್ತು 1,426 ಸೇವಾ ಮತದಾರರು ಇದ್ದಾರೆ. ಹಾಗು ಒಟ್ಟು 542 ಮತ ಗಟ್ಟೆಗಳಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 269 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳು ಇವೆ ಎಂದು ಜಿಲ್ಲಾಧಿಕಾರಿ ಡಾ. ಸತೀಶ್ ಬಿ.ಸಿ ಮಾಹಿತಿ ನೀಡಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,32148 ಮತದಾರರು ಇದ್ದು, 113585 ಪುರುಷ ಮತದಾರರು, 118553 ಮಹಿಳಾ ಮತದಾರರು ಮತ್ತು ಇತರೆ 10 ಮತದಾರರಿದ್ದಾರೆ. 5 ಸಖಿ ಮತ ಗಟ್ಟೆಗಳು, 1 ವಿಶೇಷ ಮತಗಳು, 1 ಯುವ ಮತಗಟ್ಟೆ ಇದರೊಂದಿಗೆ 2 ತೀಮ್ ಬೇಸ್ ಮತಗಟ್ಟೆ ಇವೆ. ಇನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,24,165 ಮಂದಿ ಮತದಾರರಿದ್ದಾರೆ. 111290 ಪುರುಷರು, 112862 ಮಹಿಳೆಯರು, ಇತರ 23 ಮತದಾರರಿದ್ದಾರೆ. ಈ ವ್ಯಾಪ್ತಿಯಲ್ಲಿ 5 ಸಖಿ ಮತ ಗಟ್ಟೆಗಳು, 1 ವಿಶೇಷ ಮತಗಳು, 1 ಯುವ ಮತಗಟ್ಟೆ, 1 ತೀಮ್ ಬೇಸ್ ಮತಗಟ್ಟೆ ಇದೆ. ಎರಡು ಕ್ಷೇತ್ರದಲ್ಲಿ ಮಹಿಳೆ ಮತದಾರರು ಹೆಚ್ಚು ಇದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ : ವರುಣಾದಲ್ಲಿ ಸಿದ್ದರಾಮಯ್ಯಗೆ ಸೋಲು, ಕನಕಪುರದಲ್ಲಿ ಡಿಕೆಶಿಗೆ ಟೆನ್ಷನ್: ನಳಿನ್ ಕುಮಾರ್ ಕಟೀಲ್ರು.