ಕೊಡಗು: ಅರಣ್ಯ ಇಲಾಖೆ ಸೆರೆ ಹಿಡಿದಿದ್ದ ದುಬಾರೆ ಅರಣ್ಯ ಪ್ರದೇಶದ ಆನೆ ಕುಶನನ್ನು ಮರಳಿ ಕಾಡಿಗೆ ಬಿಡಲು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೂಚಿಸಿದ್ದಾರೆ.
ದುಬಾರೆ ಸಾಕಾನೆ ಶಿಬಿರದಿಂದ ಕುಶ ಎಂಬ ಆನೆ ತಪ್ಪಿಸಿಕೊಂಡಿತ್ತು. ಅರಣ್ಯ ಇಲಾಖೆ ಕಾಡಿನಲ್ಲಿ ಹಿಡಿದು ಮತ್ತೆ ಶಿಬಿರಕ್ಕೆ ತಂದಿತ್ತು. ಆದ್ರೆ ಸಾಕಾನೆ ಶಿಬಿರದಲ್ಲಿ ಒಗ್ಗಲಿಲ್ಲ ಎಂಬ ಕಾರಣಕ್ಕೆ ಮತ್ತೆ ಅರಣ್ಯಕ್ಕೆ ಬಿಡುವಂತೆ ಅರಣ್ಯ ಸಚಿವ ಲಿಂಬಾವಳಿ ಆದೇಶ ನೀಡಿದ್ದು, ಕುಶ ಮತ್ತೆ ಕಾಡು ಸೇರಲಿದ್ದಾನೆ. ಇಂದು ಈ ಸಂಬಂಧ ಸಚಿವ ಅರವಿಂದ ಲಿಂಬಾವಳಿ ತಮ್ಮ ಕಚೇರಿಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ದುಬಾರೆ ಶಿಬಿರದಿಂದ ತಪ್ಪಿಸಿಕೊಂಡ ಆನೆ ಕುಶನನ್ನು ಸೆರೆ ಹಿಡಿದು ತರಲಾಗಿತ್ತು, ಪಳಗಿಸಲಾಗುತ್ತಿತ್ತು. ಆದರೆ ಕುಶ ಆನೆಯನ್ನು ಸೆರೆ ಹಿಡಿದು ಇಲಾಖೆಯಿಂದ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ಇಂದು ಸಭೆ ನಡೆಸಿ ಮಾಹಿತಿ ಪಡೆದರು. ಅಧಿಕಾರಿಗಳು ಕುಶ ಆನೆಗೆ ಯಾವುದೇ ತರಹದ ಹಿಂಸೆ ನೀಡಿಲ್ಲ. ಕುಶ ಆನೆ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು. ಅಂತಿಮವಾಗಿ ಸಚಿವರು ಕುಶ ಆನೆಗೆ ರೋಡಿಯೋ ಕಾಲರ್ ಅಳವಡಿಸಿ, ಬಿಡುಗಡೆ ಮಾಡಲು ಬಿಡುಗಡೆಗೆ ಸೂಕ್ತ ಸ್ಥಳ ನಿಗದಿಪಡಿಸಿದ ಮೇಲೆ ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬಿಡುಗಡೆ ಮಾಡಲು ಆದೇಶಿಸಿದರು.