ಕೊಡಗು: ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಬೆನ್ನಲ್ಲೇ ಕೊಡಗು ಪೊಲೀಸರು ಅಲರ್ಟ್ ಆಗಿದ್ದಾರೆ. ಪ್ರವಾಸೋದ್ಯಮಕ್ಕೆ ಫೇಮಸ್ ಆಗಿರುವ ಜಿಲ್ಲೆಯಲ್ಲಿ ಸಾವಿರಾರು ಹೋಂಸ್ಟೇ, ರೆಸಾರ್ಟ್‍ಗಳಿವೆ. ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಬರುವ ಸಾವಿರಾರು ಪ್ರವಾಸಿಗರ ಮೇಲೆ ಕೊಡಗು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಕೊಡಗು ಪ್ರವಾಸಿ ಜಿಲ್ಲೆಯಾಗಿದ್ದು, ಇಲ್ಲಿಗೆ ನಿತ್ಯ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಇಲ್ಲಿರುವ ಸಾವಿರಾರು ಹೋಂಸ್ಟೇ ರೆಸಾರ್ಟ್‍ಗಳಲ್ಲಿ, ಅಪಾರ ಸಂಖ್ಯೆಯ ಪ್ರವಾಸಿಗರು ತಂಗುತ್ತಾರೆ. ಆದರೆ ಯಾವ ಪ್ರವಾಸಿ ಹೇಗೆ ಎನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಹಿಂದೆಯೂ ಕೊಡಗಿನಲ್ಲಿ ಪ್ರವಾಸಿಗರ ಸೋಗಿನಲ್ಲಿ ಬಂದು ರೇವ್ ಪಾರ್ಟಿಗಳನ್ನು ನಡೆಸಿ ಸಿಕ್ಕಿಬಿದ್ದಿರುವ ಪ್ರಕರಣಗಳು ಇವೆ. ಇನ್ನು ಸ್ಯಾಂಡಲ್ವುಡ್ನ ಡ್ರಗ್ಸ್ ದಂಧೆ ಪ್ರಕರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ಜಿಲ್ಲೆಯ ಕುಶಾಲನಗರ ಸಮೀಪದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ತಂಡವೊಂದು ಕೊಡಗು ಡಿಸಿಐಬಿ ಪೊಲೀಸರಿಗೆ ಸಿಕ್ಕಿಕೊಂಡಿತ್ತು. ಜೊತೆಗೆ ಇತ್ತೀಚೆಗೆ ಸಾಕಷ್ಟು ಗಾಂಜಾ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಇವೆಲ್ಲವೂ ಕೊಡಗಿನಲ್ಲೂ ಗಾಂಜಾ ಮತ್ತು ಡ್ರಗ್ಸ್ ದಂಧೆ ಪ್ರಕರಣಗಳು ಇರಬಹುದಾ ಎನ್ನೋ ಅನುಮಾನ ಮೂಡಿದೆ. ಹೀಗಾಗಿ ಸಾರ್ವಜನಿಕರು, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂತಾ ಒತ್ತಾಯಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ಪ್ರಕರಣ ಸದ್ದು ಮಾಡುತ್ತಿದ್ದಂತೆ ಕೊಡಗು ಎಸ್ಪಿ ಕ್ಷಮಾ ಮಿಶ್ರಾ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡ್ಬೇಕು, ಬೀಟ್ಗಳಲ್ಲಿ ಎಚ್ಚರವಹಿಸಿ. ಡ್ರಗ್ಸ್ ಇರಲಿ, ಗಾಂಜಾ ಸಾಗಾಟಕ್ಕೂ ಅವಕಾಶ ಆಗದಂತೆ ಅಲರ್ಟ್ ಆಗಿರುವಂತೆ ಸೂಚಿಸಿದ್ದಾರೆ.