ಕೊಡಗು: ಜನವರಿ 9 ರಿಂದ 19ರವರೆಗೆ ಮೇಕೆದಾಟು ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಯಶಸ್ಸಿಗೆ ಕಾವೇರಿಗೆ ಪೂಜೆ ಸಲ್ಲಿಸಿದ್ದೇನೆ. ಕರ್ನಾಟಕ ರಾಜ್ಯದ ಒಳಿತಿಗಾಗಿ ಪಾದಯಾತ್ರೆ ನಡೆಸುವ ತೀರ್ಮಾನ ಕೈಗೊಂಡಿದ್ದೇವೆ ಎಂದು ತಲಕಾವೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆಗೆ ಮುಂಚಿತವಾಗಿ ತಾಯಿ ಕಾವೇರಿಗೆ ಪೂಜೆ ಸಲ್ಲಿಸುತ್ತಿದ್ದೇವೆ, ಕಾವೇರಿ ಪವಿತ್ರವಾದ ಪುಣ್ಯ ನದಿ. ಪಾಪಗಳನ್ನು ನಿರ್ಮೂಲನೆ ಮಾಡುವ ಶಕ್ತಿ ಈ ತಾಯಿಗಿದೆ. ರಾಜ್ಯದ ಮೂರು ಕೋಟಿಗೂ ಹೆಚ್ಚು ಜನರಿಗೆ ಈ ನದಿಯಿಂದ ಅನುಕೂಲವಾಗುತ್ತಿದೆ. ನೀರಿನ ಬಳಕೆ ವಿಚಾರದಲ್ಲಿ ಹಲವು ಹೋರಾಟ ಆಗುತ್ತಿದೆ, ಅನೇಕ ಮಹನೀಯರು ಇದಕ್ಕಾಗಿ ಹೋರಾಡಿದ್ದಾರೆ ಎಂದರು.
ಈ ವರ್ಷ 104 ಟಿಎಂಸಿ ನೀರು ಸಮುದ್ರ ಸೇರಿದೆ. ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಬೇಕು, ಅದರಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಬೆಂಗಳೂರಿಗೆ ನಿರಂತರ ನೀರು ಸರಬರಾಜಾಗುತ್ತದೆ. ಮಳೆ ಇಲ್ಲದಾಗ ರೈತರಿಗೆ ನೀರು ಒದಗಿಸಬಹುದು. ಈ ಯೋಜನೆಗೆ ಕೇಂದ್ರ ಅನುಮೋದನೆಯನ್ನೂ ನೀಡಿದ್ದು, ಪರಿಸರ ಇಲಾಖೆ ಕ್ಲಿಯರೆನ್ಸ್ ಕೊಡಬೇಕು. ಕೇಂದ್ರ ಸರ್ಕಾರದಿಂದ ಪರಿಹಾರ ಕೊಡುವ ವ್ಯವಸ್ಥೆ ಆಗಬೇಕು. ಕೂಡಲೇ ಯೋಜನೆ ಪ್ರಾರಂಭ ಆಗಬೇಕು. ಈ ಬಗ್ಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಬೇಕು. ಪಾದಯಾತ್ರೆಗೆ ಎಲ್ಲರೂ ಸಹಕಾರ ಕೊಡಬೇಕು ರಾಜ್ಯದ ಹಿತಕ್ಕಾಗಿ ಹೋರಾಟ ಮಾಡಬೇಕು ಎಂದರು.
ಕಾವೇರಿ ನಮ್ಮದು, ನೀರು ನಮ್ಮದು :
ಈ ಯೋಜನೆಯಿಂದ ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ. ಎಲ್ಲ ಪಕ್ಷದವರೂ ಬೆಂಬಲ ಕೊಡುತ್ತಿದ್ದಾರೆ. ಜೆಡಿಎಸ್, ಬಿಜೆಪಿಯವರು ಬೆಂಬಲಿಸೋದಾಗಿ ಹೇಳಿದ್ದಾರೆ. ಈ ಪಾದಯಾತ್ರೆಗೆ ಕಾಂಗ್ರೆಸ್ ನಾಯಕತ್ವ ತೆಗೆದುಕೊಂಡಿದೆ ಅಷ್ಟೇ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಜಲಾಶಯ ಆಗಬೇಕು. ಈ ವಿಚಾರವಾಗಿ ಹೋರಾಟ ಬಹಳ ದಿನಗಳಿಂದ ನಡೆಯುತ್ತಿದೆ. ಅಲ್ಲದೇ ಈ ಯೋಜನೆಯಿಂದ ಈಗಾಗಲೇ ಕೊರತೆಯಾಗಿರುವ ಒಂದಷ್ಟು ವಿದ್ಯುತ್ ಸಮಸ್ಯೆ ನೀಗಿಸಬಹುದು. ರೈತರಿಗೆ ಬೇಸಗೆಯಲ್ಲಿ ನೀರಿಲ್ಲದ ಸಮಯದಲ್ಲಿ ವ್ಯವಸಾಯ ಹಾಗು ವ್ಯವಸಾಯೇತರ ಕೆಲಸಗಳಿಗೆ ಅಣೆಕಟ್ಟಿನಿಂದ ನೀರನ್ನು ಒದಗಿಸಬಹುದಾಗಿದೆ ಎಂದರು.