ಕೊಡಗು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಉಲ್ಬಣಿಸುತ್ತಿದ್ದು ಒಟ್ಟು 26 ಪ್ರಕರಣಗಳಲ್ಲಿ 23 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ 4 ಪ್ರಕರಣಗಳು ಮತ್ತೆ ದೃಢಪಟ್ಟಿವೆ. ಬೆಳಗ್ಗೆ ಸೌದಿಯಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಕಂಡು ಬಂದಿದೆ. ಬಿಟ್ಟಂಗಾಲದ ಮಹಿಳೆಗೆ ಪಾಸಿಟಿವ್ ಬಂದಿದ್ದು, ಆ ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಕಂಡು ಬಂದಿಲ್ಲ. ಜನರಲ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 3 ವೈದ್ಯರು ಹಾಗೂ ಅವರ ಜೊತೆಗೆ ಖಾಸಗಿ ಕ್ಲಿನಿಕ್ ಸಿಬ್ಬಂದಿಗೂ ಪಾಸಿಟಿವ್ ಕಂಡುಬಂದಿದೆ ಎಂದು ತಿಳಿಸಿದರು.
ಸೋಮವಾರಪೇಟೆ ತಾಲ್ಲೂಕಿನಲ್ಲಿ 5, ಮಡಿಕೇರಿ ತಾಲೂಕಿನಲ್ಲಿ 6 ಹಾಗೆಯೇ ವಿರಾಜಪೇಟೆಯಲ್ಲಿ 1 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 12 ಕಂಟೈನ್ಮೆಂಟ್ ಪ್ರದೇಶವನ್ನು ಗುರುತಿಸಲಾಗಿದೆ. ಅಲ್ಲದೇ ಹೋಟೆಲ್ ಹಾಗೂ ಹೋಮ್ ಸ್ಟೇಗಳಿಗೆ ಆಗಮಿಸುವ ಪ್ರವಾಸಿಗರ ಗಂಟಲ ದ್ರವವನ್ನು ಪರೀಕ್ಷಿಸಲಾಗುವುದು ಎಂದರು.
ಕಂಟೈನ್ಮೆಂಟ್ ಪ್ರದೇಶಗಳಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತದೆ. ಆ ವಿದ್ಯಾರ್ಥಿಗಳ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು. ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವವರು ಇದ್ದರೆ ಅಥವಾ ಕೊರೊನಾ ಲಕ್ಷಣ ಇದ್ದರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.