ಕೊಡಗು: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದೆ. ಮಳೆಯಿಂದಾಗಬಹುದಾದ ಅನಾಹುತಗಳ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಕೊಡಗು ಜಿಲ್ಲಾಧಿಕಾರಿ ಜೊತೆ ವಿಡಿಯೋ ಸಂವಾದ ನಡೆಸಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಹಾಗೂ ಭೂ ಕುಸಿತ ಸಂಭವಿಸಬಹುದಾದ ಸೂಕ್ಷ್ಮ ಪ್ರದೇಶಗಳ ಜನರ ಸ್ಥಳಾಂತರ ಸಂಬಂಧ ನೋಟಿಸ್ ನೀಡಿ ಸುಮ್ಮನಾದರೆ ಸಾಲದು, ಅಂತಹ ಸೂಕ್ಷ್ಮ ಪ್ರದೇಶಗಳ ಜನರಿಗೆ 'ಮನವರಿಕೆ' ಮಾಡಿ ಸ್ಥಳಾಂತರ ಮಾಡುವಂತೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಚಿವ ಆರ್.ಅಶೋಕ್ ನಿರ್ದೇಶನ ನೀಡಿದರು.
ಮುಂಗಾರು ಆರಂಭ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ಸಂಬಂಧ ಕೈಗೊಳ್ಳಲಾಗಿರುವ ಸಿದ್ಧತೆ ಸಂಬಂಧ ವಿಡಿಯೋ ಸಂವಾದ ಮೂಲಕ ಮಾಹಿತಿ ಪಡೆದು ಸಚಿವರು ಮಾತನಾಡಿದರು. ಭೂ ಕುಸಿತ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ ಎಂದು ಸುಮ್ಮನಿದ್ದರೆ ಸಾಲದು. ಕಳೆದ ಬಾರಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅರ್ಚಕರ ಕುಟುಂಬವು ಭೂ ಕುಸಿತಕ್ಕೆ ತುತ್ತಾಯಿತು. ಆದ್ದರಿಂದ ಕಳೆದ ಬಾರಿಯಂತೆ ಆಗಬಾರದು. ನೋಟಿಸ್ ನೀಡಲಾಗಿದೆ. ಆದರೆ ಸ್ಥಳಾಂತರ ಆಗಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ಬರಬಾರದು ಎಂದು ಸಚಿವರು ಸೂಚನೆ ನೀಡಿದರು.
ಸೂಕ್ಷ್ಮ ಪ್ರದೇಶದ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಆ ದಿಸೆಯಲ್ಲಿ ಶಾಲೆ ಮತ್ತು ಸಮುದಾಯ ಭವನ ಕಾಯ್ದಿರಿಸಬೇಕು. ಪರಿಹಾರ ಕೇಂದ್ರಕ್ಕೆ ದಾಖಲಾಗುವವರಿಗೆ ಒಳ್ಳೆಯ ಬೆಡ್ ಶೀಟ್, ಚಾಪೆ ನೀಡಬೇಕು. ಉತ್ತಮ ಉಪಹಾರ, ಊಟ, ಜೊತೆಗೆ ಔಷಧಿ ದೊರೆಯಬೇಕು. ಹಾಗೆಯೇ ಶೌಚಾಲಯ, ಬಿಸಿ ನೀರು ಇರಬೇಕು ಎಂದು ಸಚಿವರು ತಿಳಿಸಿದರು.
ಪ್ರಾಕೃತಿಕ ವಿಕೋಪ ಸಂಬಂಧ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಪ್ರತಿನಿತ್ಯ ಮಾಹಿತಿ ನೀಡಬೇಕು. ಪ್ರತಿ ಹಂತದ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ನಾನು ಸಹ ಶೀಘ್ರ ಕೊಡಗು ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ ಎಂದು ಸಚಿವರು ತಿಳಿಸಿದರು.