ಕೊಡಗು: ಕರುನಾಡ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17ರ ಸಂಜೆ 7 ಗಂಟೆ 21 ನಿಮಿಷಕ್ಕೆ ಮೇಷ ಲಗ್ನದಲ್ಲಿ ತೀರ್ಥೋದ್ಭವ ಜರುಗಲಿದ್ದು, ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ಧಾರೆ. ಒಂದು ತಿಂಗಳ ಕಾಲ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ಜಿಲ್ಲಾಡಳಿತ ಸಕಲಸಿದ್ದತೆ ಮಾಡಿಕೊಂಡಿದೆ.
ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಬವಕ್ಕೆ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿದೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದು, ಇದಕ್ಕಾಗಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲ ಸಕಲರೀತಿಯಲ್ಲಿ ಸಿದ್ಧತೆ ನಡೆಯುತ್ತಿದೆ.
ಕೊಡವರ ಕುಲದೇವತೆ ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಬವಕ್ಕೆ ಜಿಲ್ಲಾಡಳಿತ ಕೂಡ ಈಗಾಗಲೇ ತಯಾರಿ ಮಾಡಿಕೊಂಡಿದೆ. ಅಕ್ಟೋಬರ್ 17ರ ಸಂಜೆ 7ಗಂಟೆ 21 ನಿಮಿಷಕ್ಕೆ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಈ ವಿಸ್ಮಯನೋಡಲು ಜನರು ಕಾತರರಾಗಿ ಕಾಯುತ್ತಿದ್ದಾರೆ.
ವಾರದಿಂದಲೇ ನಾನಾ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ ಕಾವೇರಿಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಈ ಬಾರಿ ಜಲಪ್ರಳಯದಿಂದ ತತ್ತರಿಸಿರೋ ಜನತೆಗೆ ಕಾವೇರಿ ತಾಯಿ ತೀರ್ಥರೂಪಿಣಿಯಾಗಿ ಬಂದು ಒಳ್ಳೇದು ಮಾಡಲಿದ್ದಾಳೆ ಅನ್ನೋ ನಂಬಿಕೆ ಭಕ್ತಗಣದ್ದಾಗಿದೆ.
ಬ್ರಹ್ಮಗಿರಿಯ ಮಡಿಲಿನಲ್ಲಿ ಹುಟ್ಟುವ ಕಾವೇರಿಮಾತೆ ರಾಜ್ಯದಲ್ಲಿ ಹರಿದು ರೈತರ ಹೊಲಗದ್ದೆಗಳನ್ನು ಹಸಿರಾಗಿಸಿ, ಅನ್ನದಾತೆಯಾಗಿ ಹರಿಯುತ್ತಾಳೆ. ಹಾಗಾಗಿ ಕಾವೇರಿ ನೀರನ್ನು ಬಳಸುವ ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆಗಳಿಂದ ಸೇರಿದಂತೆ ದೇಶದ ಹಲವೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
400ಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ, ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥ ಸಂಗ್ರಹಿಸಲು ಮುಗಿಬೀಳುವ ಜನರು ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ 12 ಕಿಲೋಮೀಟರ್ ದೂರದಿಂದಲೇ ಲೈಟಿಂಗ್ ವ್ಯವಸ್ಥೆಗಾಗಿ 1500ಕ್ಕೂ ಹೆಚ್ಚು ಟ್ಯೂಬ್ಲೈಟ್ಗಳು, ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 400ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಒಂದು ತಿಂಗಳ ಜಾತ್ರೆಗೆ ಜಿಲ್ಲಾಡಳಿತ ಸಜ್ಜು: ಕಾವೇರಿ ಮಾತೆಯ ದರ್ಶನಕ್ಕೆ ಸಹಸ್ರ ಸಹಸ್ರ ಭಕ್ತರು ಲಗ್ಗೆಯಿಡುತ್ತಿದ್ದು, ಯಾವುದೇ ರೀತಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಏಕಮುಖ ಸಂಚಾರದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ತೀರ್ಥಸ್ವರೂಪಿಣಿಯಾದ ಕಾವೇರಿಮಾತೆಯ ದರ್ಶನಕ್ಕಾಗಿ ಭಕ್ತರು ಕಾಯುತ್ತಿದ್ದು, ಒಂದು ತಿಂಗಳ ಜಾತ್ರೆಗೆ ಜಿಲ್ಲಾಡಳಿತ ಕೂಡ ಸಜ್ಜಾಗಿದೆ.
ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಹಾಗೂ ಗುಡ್ಡಕುಸಿತದ ಭೀತಿಯಿಂದ ಸರಳವಾಗಿ ನಡೆಯುತ್ತಿದ್ದ ಕಾವೇರಿ ಜಾತ್ರಾ ಮಹೋತ್ಸವ ಈ ಭಾರಿ ಅದ್ದೂರಿಯಾಗಿ ನಡೆಯಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ರಾಜ್ಯದಲ್ಲಿ ಜಲಪ್ರಳಯಕ್ಕೆ ಸಿಕ್ಕಿ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಎಲ್ಲವನ್ನೂ ಕಾವೇರಿ ಮಾತೆ ಪರಿಹರಿಸುತ್ತಾಳೆ ಅನ್ನೋ ಅಚಲ ನಂಬಿಕೆ ಭಕ್ತಗಣದ್ದಾಗಿದೆ. ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಇನ್ನೊಂದು ದಿನ ಬಾಕಿಯಿದ್ದು, ಈ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತಗಣ ಕಾತರರಾಗಿ ಕಾದುಕುಳಿತಿದೆ.
ಓದಿ: ನಾಳೆ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ: ಕೊಡಗು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ