ಕೊಡಗು: ಹಣಕಾಗಿ ತನ್ನ ಗಂಡನ ಜೊತೆ ಸೇರಿ ಸ್ವಂತ ಚಿಕ್ಕಮ್ಮನನ್ನೇ ಹತ್ಯೆ ಮಾಡಿ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೋಲಿಸರು ಯಶಸ್ವಿಯಾಗಿದ್ದಾರೆ.
ರವಿ ಹಾಗೂ ಲಿಖಿತಾ ಬಂಧಿತರು. ಕಳೆದ ಮಾರ್ಚ್ 30ರಂದು ಒಂಟಿಯಾಗಿ ಜೀವನ ನಡೆಸುತ್ತಿದ್ದ ಉಷಾ ಅವರ ಮೇಕೇರಿಯಲ್ಲಿ ಇರುವ ಮನೆಗೆ ಲಿಖಿತಾ ಹಾಗೂ ರವಿ ಆಗಮಿಸಿದ್ದಾರೆ. ಚಿಕ್ಕಮ್ಮನ ಬಳಿ ಚಿನ್ನಾಭರಣ ಮತ್ತು ಸಾಕಷ್ಟು ಹಣ ಇರುವುದನ್ನು ಅರಿತ ಲಿಖಿತಾ ಆಗಿಂದಾಗ್ಗೆ ಅವರ ಮನೆಗೆ ಬಂದು ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ.
ಕೆಸುವಿನ ಗೆಡ್ಡೆ ಕೃಷಿಯಿಂದ ನಷ್ಟವಾಗಿ ಇರುವ ಎರಡು ವಾಹನ ಮಾರಾಟ ಮಾಡಿದ್ದರೂ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಈ ನಡುವೆ 18 ತಿಂಗಳು ಮನೆ ಬಾಡಿಗೆಯನ್ನೂ ಕಟ್ಟಿರಲಿಲ್ಲ. ಇದೇ ಕಾರಣಕ್ಕೆ ಚಿಕ್ಕಮ್ಮನ ಮನೆಗೆ ಆಗಮಿಸಿ ಅವರನ್ನು ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.
ಕೊಲೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಂದು ಬೈಕ್, ಚಿನ್ನದ ಓಲೆ, ಒಂದು ಸರ ಮತ್ತು 50 ಸಾವಿರ ನಗದನ್ನು ವಶಕ್ಕೆ ಪಡೆಯಲಾಗಿದೆ.