ಕೊಡಗು: ತುರ್ತು ವಾಹನ ಸರಿಯಾದ ಸಮಯಕ್ಕೆ ಬಾರದ ಕಾರಣ ಕೊರೊನಾ ರೋಗಿ ರಸ್ತೆಯಲ್ಲಿ ಬಿದ್ದು ಒದ್ದಾಡಿ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ನಿವಾಸಿ 23 ವರ್ಷದ ಯುವಕ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಈತ ಜ್ವರ ಬಂದಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ಹೋಗಿ ಬಂದಿದ್ದ. ಬಳಿಕ ತೀವ್ರ ಜ್ವರ ಕಾಣಿಸಿಕೊಂಡು ಬುಧವಾರ ಬೆಳಗ್ಗೆ ಉಸಿರಾಟದ ತೊಂದರೆ ಹೆಚ್ಚಾಗಿತ್ತು. ಆ್ಯಂಬುಲೆನ್ಸ್ಗೆ ಕರೆ ಮಾಡಿದ್ರೆ ವಾಹನ ಮಧ್ಯಾಹ್ನ ಬಜೆ ಗುಂಡೆಗೆ ಬಂದಿದೆ ಎನ್ನಲಾಗ್ತಿದೆ.
ದುರಂತ ಅಂದ್ರೆ ತುರ್ತುವಾಹನ ಸಿಬ್ಬಂದಿ ಮಾತ್ರ ಹತ್ತಿರಕ್ಕೆ ಬಂದಿಲ್ಲ. ಸ್ವಲ್ಪ ದೂರದಲ್ಲಿ ನಿಲ್ಲಿಸಿ ವಾಹನ ಹತ್ತುವಂತೆ ಹೇಳಿದ್ದಾರೆ. ಆದ್ರೆ ವಾಹನ ಸಿಬ್ಬಂದಿ ಪಿಪಿಇ ಕಿಟ್ ಧರಿಸದೇ ಇದ್ದ ಕಾರಣ ರೋಗಿಯ ಹತ್ತಿರಕ್ಕೆ ಸುಳಿದಿಲ್ಲ. ನಂತ್ರ ಕಷ್ಟಪಟ್ಟು ತಾಯಿ ಮಗನನ್ನು ವಾಹನಕ್ಕೆ ಹತ್ತಿಸಿದ್ದಾರೆ. ಆಗ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದ ನಡುವೆ ಮಗ ಸಾವನ್ನಪ್ಪಿದ್ದಾನೆ.
ರೋಗಿಗಾಗಿ ತುರ್ತು ಸಮಯಕ್ಕೆ ವಾಹನ ಸರಿಯಾಗಿ ಬಂದಿಲ್ಲ ಮತ್ತು ತುರ್ತು ವಾಹನದ ಸಿಬ್ಬಂದಿ ಪಿಪಿಇ ಕಿಟ್ ಕೊಟ್ಟಿಲ್ಲ. ನಾವು ಕೊರೊನಾ ರೋಗಿಯನ್ನು ಹೇಗೆ ಮುಟ್ಟುವುದು ಎಂದು ವಾಹನದ ಸಿಬ್ಬಂದಿ ಹೇಳಿದ್ದಾರೆ.
ಸಮಾರು 2ಗಂಟೆ ಸಮಯದಲ್ಲಿ ಸೋಂಕಿತ ಸಾವನಪ್ಪಿದ್ದಾನೆ. ಯಾರ ಬಳಿಯೂ ಪಿಪಿಇ ಕಿಟ್ ಅಥವಾ ಇನ್ನಿತರ ರಕ್ಷಾ ಕವಚ ಇಲ್ಲದ ಹಿನ್ನೆಲೆ, ತುರ್ತು ವಾಹನಕ್ಕೆ ಯುವಕನನ್ನು ಸ್ಥಳಾಂತರಿಸಲು ಸಾಧ್ಯ ಆಗದೇ ಯುವಕ ಕೆಲಕಾಲ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾನೆ.
ಆ್ಯಂಬುಲೆನ್ಸ್ ಸಿಬ್ಬಂದಿಗೂ ಕೂಡ ಪಿಪಿಇ ಕಿಟ್ ಇರಲಿಲ್ಲ. ಜಿಲ್ಲಾಡಳಿತ ದಯವಿಟ್ಟು ಹಗಲು ರಾತ್ರಿ ಎನ್ನದೆ ಫ್ರಂಟ್ ಲೈನ್ ವರ್ಕರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ತುರ್ತು ವಾಹನದ ಸಿಬ್ಬಂದಿಗೆ ಪ್ರಾಥಮಿಕ ಕವಚ ಪಿಪಿಇ ಕಿಟ್ ಒದಗಿಸಿ ಅವರ ಪ್ರಾಣ ಉಳಿಸುವ ಕಾರ್ಯ ಮಾಡಿ ಹಾಗೂ ಎಲ್ಲಾ ತುರ್ತು ವಾಹನಗಳಲ್ಲಿ ಕನಿಷ್ಠ ಪಕ್ಷ 5 ಪಿಪಿಇ ಕಿಟ್ ಗಳನ್ನು ಹೆಚ್ಚುವರಿಯಾಗಿ ಇಡಿ, ಏಕೆಂದರೆ ಯಾರಾದರೂ ಸ್ವಯಂ ಸೇವಕ ಯುವಕರು ಮುಂದೆ ಬರುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.