ಕೊಡಗು: ಭೀಕರ ಭೂ ಕುಸಿತವನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಂಡ ಬಡ ಕುಟುಂಬಗಳಿಗೆ ಇದೀಗ ಕೊರೊನಾ ಮಹಾಮಾರಿ ಮತ್ತೆ ಅತಂತ್ರ ಪರಿಸ್ಥಿತಿಗೆ ದೂಡಿದೆ.
ಮಡಿಕೇರಿ ತಾಲೂಕಿನ ಕಾಲೂರಿನಲ್ಲಿ 2018ರಲ್ಲಿ ಭೀಕರ ಭೂ ಕುಸಿತ ಸಂಭವಿಸಿತ್ತು. ಆ ವೇಳೆ ಅದೆಷ್ಟೋ ಮಂದಿ ಮನೆ ಮಠಗಳನ್ನು ಕಳೆದುಕೊಂಡಿದ್ದರು. ಬಳಿಕ ಇದಾವುದಕ್ಕೂ ಕುಗ್ಗದೆ ಅದೇ ಊರಿನಲ್ಲಿ ಸ್ವಂತ ಉದ್ಯೋಗ ಆರಂಭಿಸಿದ್ದ ಇಲ್ಲಿನ ಮಹಿಳೆಯರು, ಚಾಕೊಲೇಟ್, ಮಸಾಲೆ ಪದಾರ್ಥಗಳನ್ನು ಮಾರಲು ಮಡಿಕೇರಿಯ ಪ್ರವಾಸಿ ತಾಣ ರಾಜಾಸೀಟ್ ಬಳಿ ಆಸರೆ ಮಳಿಗೆ ತೆರೆದಿದ್ದರು. ಆದರೆ ಇದೀಗ ಕೊರೊನಾ ಮಹಾಮಾರಿಯಿಂದ ಪ್ರವಾಸೋದ್ಯಮ ಸೇರಿದಂತೆ ಕೊಡಗಿನ ವ್ಯಾಪಾರ ವಹಿವಾಟು ಸ್ಥಗಿತವಾಗಿದೆ. ಹೀಗಾಗಿ ಭೂ ಕುಸಿತದಲ್ಲಿ ನಲುಗಿದ್ದ ಸಂತ್ರಸ್ತರ ಬದುಕು ಮತ್ತೆ ಅತಂತ್ರವಾಗಿದೆ.
ಮಸಾಲೆ ಪದಾರ್ಥಗಳನ್ನು ಮಾರುವ ಜೊತೆಗೆ ಹತ್ತಾರು ಮಹಿಳೆಯರು ಟೈಲರಿಂಗ್ ಮಾಡುವ ಮೂಲಕ ಬದುಕು ಕಂಡುಕೊಂಡಿದ್ದರು. ವಿವಿಧ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳ ಸಮವಸ್ತ್ರಗಳನ್ನು ಹೊಲಿದು, ಉತ್ತಮ ಆದಾಯ ಗಳಿಸುತ್ತಿದ್ದರು. ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹೊಲಿದಿದ್ದಾರೆ. ಆದರೆ ಕೊರೊನಾ ಮಿತಿ ಮೀರುತ್ತಿರುವುದರಿಂದ ಶಾಲೆಗಳು ಆರಂಭವಾಗದೆ, ಲಕ್ಷಾಂತರ ಬಂಡವಾಳ ಹಾಕಿ ಹೊಲಿದಿರುವ ಸಮವಸ್ತ್ರಗಳು ಹಾಗೇ ಉಳಿದಿವೆ. ಹೀಗಾಗಿ ಸಂತ್ರಸ್ತರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮಸಾಲೆ ಉತ್ಪಾದನಾ ಘಟಕ ಮತ್ತು ಟೈಲರಿಂಗ್ ಘಟಕಗಳಲ್ಲಿ 60ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಆದಾಯವಿಲ್ಲದೆ ಸಿಬ್ಬಂದಿಗೆ ಸಂಬಳವೂ ಇಲ್ಲದೆ ಬದುಕು ಅತಂತ್ರವಾಗಿದೆ.