ಕೊಡಗು : ಕಾಫಿನಾಡು ಕೊಡಗಿನಲ್ಲೀಗ ಎಲ್ಲೆಡೆ ಕಾಫಿ ಹೂ ಕಂಪು ಬೀರುತ್ತಿದೆ. ಕಾಫಿ ಕೊಯ್ಲು ಮುಗಿದು ಮುಂದಿನ ಫಸಲಿಗೆ ರೆಡಿಯಾಗುತ್ತಿರೋ ಕಾಫಿ ತೋಟಗಳಲ್ಲಿ ಅರಳಿ ನಿಂತಿರೋ ಶ್ವೇತವರ್ಣದ ಕುಸುಮಗಳು ಸುಗಂಧ ಬೀರುತ್ತಿವೆ. ವಿಶಾಲ ಪ್ರದೇಶದಲ್ಲಿ ಹಾಲು ಉಕ್ಕಿದಂತೆ ಕಂಡು ಬರುತ್ತಿರೋ ದೃಶ್ಯ ನಯನ ಮನೋಹರವಾಗಿದೆ. ನೋಡುಗರ ಕಣ್ಮನಸೆಳೆಯುತ್ತಿವೆ.
ದಕ್ಷಿಣದ ಕಾಶ್ಮೀರ ಅಂತೆಲೇ ಕರೆಸಿಕೊಳ್ಳುವ ಕಾಫಿ ನಾಡಿನಲ್ಲೀಗ ಕಾಫಿ ಹೂವಿನ ಘಮಲು ಹರಡಿದೆ. ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ರೊಬೊಸ್ಟಾ ಕಾಫಿ ತೋಟಗಳಲ್ಲಿ ಹೂಗಳು ನಳನಳಿಸುತ್ತಿವೆ. ಕಣ್ಣು ಹಾಯಿಸಿದಷ್ಟು ದೂರ ಹಾಲಿನ ನೊರೆಯಂತೆ ಕಂಡು ಬರುತ್ತಿದೆ.
ಕಾಫಿ ಹಣ್ಣನ್ನು ಕೂಯ್ಲು ಮಾಡಿದ ನಂತರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸುರಿಯೋ ಮಳೆ ಮತ್ತು ತುಂತುರು ನೀರಾವರಿ ವೇಳೆ ಕಾಫಿ ತೋಟಗಳ ಬಣ್ಣವೇ ಬದಲಾಗುತ್ತದೆ. ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಭಾಸವಾಗುವ ಈ ಸುಂದರ ದೃಶ್ಯ ನೋಡೋದೇ ಖುಷಿ ವಿಚಾರ ಎನ್ನುತ್ತಾರೆ ಪ್ರವಾಸಿಗರು.
ರಸ್ತೆಯಲ್ಲಿ ಸಂಚರಿಸೋ ಜನ ಒಂದು ಕ್ಷಣ ನಿಂತು ಹೂವಿನ ಅಂದ ಸವಿಯುತ್ತಾ ವರ್ಷಕ್ಕೊಮ್ಮೆ ದರ್ಶನ ನೀಡೋ ಈ ವಿಶಿಷ್ಟ ಕುಸುಮ ರಾಶಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಇದನ್ನೂ ಓದಿ: ದುಬಾರೆ ಕ್ಯಾಂಪ್ನಿಂದ ಕಾಡು ಸೇರಿ ವರ್ಷವಾದ್ರೂ ಹಿಂದಿರುಗದ ಕುಶ : ಸಾಕಾನೆಗಾಗಿ ಅರಣ್ಯ ಇಲಾಖೆ ಅಲೆದಾಟ