ಉಡುಪಿ : ನಮ್ಮ ಸನಾತನ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆ ಜೊತೆಗೆ ವೇದಾಧ್ಯಯನ ಮತ್ತು ಮಠ ಮಂದಿರಗಳ ಸಂರಕ್ಷಣೆಯೂ ನಡೆಯಬೇಕಾಗಿದೆ ಎಂದು ಕಂಚಿ ಕಾಮಕೋಟಿ ಮಠಾಧೀಶ ಶಂಕರಾಚಾರ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಕರೆ ನೀಡಿದ್ದಾರೆ.
ಅವರು ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಡಿ. 29ರ ವರೆಗೆ ತ್ರಿಪಕ್ಷ ಶತವೈಭವ ಘೋಷವಾಕ್ಯದಡಿ ಆಯೋಜಿಸಲಾಗಿರುವ ಬೃಹತ್ ಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.
ಗೀತೆಯ ಸಂದೇಶ ಪ್ರತೀ ಮನೆ ಮನೆಗಳಿಗೆ ತಲುಪಬೇಕು : ದೇವಾಲಯಗಳಲ್ಲಿ ಸನ್ನಿಧಿ ವೃದ್ಧಿಯಾದರೆ ಮಾತ್ರ ಸಾಲದು, ಜೊತೆಗೆ ನಿಧಿಯ ವೃದ್ಧಿಯೂ ಆಗಬೇಕಾಗಿದೆ. ಅದಕ್ಕಾಗಿ ದೇವಳ ನಿರ್ವಹಣೆ ಸಿಬ್ಬಂದಿಯನ್ನ ವ್ಯವಸ್ಥಿತವಾಗಿ ಸಿದ್ದಪಡಿಸಬೇಕು ಎಂದರಲ್ಲದೇ, ಗೀತೆಯ ಸಂದೇಶ ಪ್ರತಿ ಮನೆ ಮನೆಗಳಿಗೆ ತಲುಪಬೇಕು ಎಂದು ಆಶಿಸಿದರು.
ಅಧ್ಯಾತ್ಮ ಮತ್ತು ಲೌಕಿಕ ಸಾಧನೆಗೆ ಗೀತೆ ಪೂರಕ : ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಅಧ್ಯಾತ್ಮ ಮತ್ತು ಲೌಕಿಕ ಸಾಧನೆಗೆ ಗೀತೆ ಪೂರಕ, ಮನುಷ್ಯನ ಸರ್ವಾಂಗೀಣ ಪ್ರಗತಿ ಗೀತೆಯಲ್ಲಿ ಕೃಷ್ಣ ತಿಳಿಸಿದ್ದಾನೆ. ಈ ರೀತಿಯ ಬೋಧನೆ ಯಾವುದೇ ಧರ್ಮಗ್ರಂಥಗಳಲ್ಲಿ ಉಪಲಬ್ದವಿಲ್ಲ. ಆದ್ದರಿಂದ ಗೀತೆಯ ಪ್ರಚಾರ ವಿಶ್ವವ್ಯಾಪಿಯಾಗಬೇಕು ಎಂಬ ಆಶಯದಿಂದ ಈ ಗೀತೋತ್ಸವ ಸಂಘಟಿಸಿರುವುದಾಗಿ ತಿಳಿಸಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಪ್ರೀಂದ್ರತೀರ್ಥರು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಶಾಸಕರಾದ ಯಶ್ಪಾಲ್ ಸುವರ್ಣ ಮತ್ತು ಗುರುರಾಜ್ ಗಂಟಿಹೊಳಿ, ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಶಿ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ. ನಿ. ಬೀ ವಿಜಯ ಬಲ್ಲಾಳ್, ಆನೆಗುಡ್ಡೆ ದೇವಸ್ಥಾನದ ಮಾಜಿ ಮೊಕ್ತಸರ ಸೂರ್ಯನಾರಾಯಣ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಉಡುಪಿ : ಕೃಷ್ಣ ಮಠದಲ್ಲಿ ಲಕ್ಷ ದೀಪೋತ್ಸವ ಸಂಭ್ರಮ