ಕೊಡಗು: ಸ್ವಾತಂತ್ರ್ಯ ಬಂದು 75 ವರ್ಷಗಳಾದ್ರೂ ಜನರು ಸೂರು, ಮೂಲಸೌಕರ್ಯ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೋ ಸಾವನ್ನಪ್ಪುವ ಪರಿಸ್ಥಿತಿ ಇನ್ನೂ ಕೊಡಗಿನಲ್ಲಿ ಜೀವಂತವಾಗಿದೆ. ಕುಡಿವ ನೀರಿಲ್ಲ, ಮಕ್ಕಳಿಗೆ ವಿದ್ಯಾಭ್ಯಾಸ ಇಲ್ಲ, ಬೆಳಕು ಕಾಣದೇ ಕತ್ತಲಲ್ಲಿ ಜೀವನ ಸಾಗಿಸುತ್ತಿರುವ ಇವರು ಈ ಬಾರಿ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.
ಸಂಪದ್ಭರಿತ ಕೊಡಗು ಜಿಲ್ಲೆಯಲ್ಲಿ ಇಂದಿಗೂ ಕಾರ್ಮಿಕರಾಗಿ ದುಡಿಯುತ್ತಿರುವ ಸಾವಿರಾರು ಆದಿವಾಸಿ ಕುಟುಂಬಗಳು ಸ್ವಂತ ಸೂರಿಲ್ಲದೆ ಕಾಫಿ ತೋಟಗಳಲ್ಲಿ ದುಡಿಯುತ್ತಾ ಅಲ್ಲಿನ ಲೈನ್ ಮನೆಗಳಲ್ಲಿ ತಮ್ಮ ಇಡೀ ಬದುಕು ಸವೆಸುತ್ತಿವೆ. ಆದರೆ ನಮಗೂ ಒಂದು ಸ್ವಂತ ಸೂರು ಬೇಕೆಂದು ಹೊರಬಂದ ಕುಟುಂಬಗಳು, ತಮ್ಮ ದಾಖಲೆಗಳಿಲ್ಲದೆ, ತಾವು ಈ ದೇಶದ ಪ್ರಜೆಗಳೋ ಅಲ್ಲವೋ ಎಂಬ ಸ್ಥಿತಿಯಲ್ಲಿ ಬದುಕುತ್ತಿವೆ. ಇಂಥ ಸ್ಥಿತಿಯನ್ನು ಕೊಡಗಿನ ನೂರಾರು ಆದಿವಾಸಿ ಕುಟುಂಬಗಳು ಆರೇಳು ವರ್ಷಗಳಿಂದ ಅನುಭವಿಸುತ್ತಿವೆ. ವಿರಾಜಪೇಟೆ ತಾಲೂಕಿನ ಹೈಸೊಡ್ಲೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂತಹ ದುಸ್ಥಿತಿ ಇದೆ.
ತಲೆತಲಾಂತರಗಳಿಂದ ಕಾಫಿ ಎಸ್ಟೇಟ್‍ಗಳಲ್ಲಿ ಕೂಲಿ ಮಾಡುತ್ತಾ ಬದುಕುತ್ತಿದ್ದ ಕುಟುಂಬಗಳು ಅಲ್ಲಿನ ಲೈನ್‍ಮನೆಗಳನ್ನು ಬಿಟ್ಟು ಸ್ವಂತ ಸೂರು ಕಟ್ಟಿಕೊಳ್ಳುವುದಕ್ಕಾಗಿ ಸರ್ಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಬದುಕುತ್ತಿದ್ದಾರೆ. ಸರ್ಕಾರಿ ಜಾಗಕ್ಕೆ ಬಂದು ನೆಲೆಯೂರಿರುವ ಕುಟುಂಬಗಳಿಗೆ ಮೂಲಸೌಕರ್ಯ, ಆಶ್ರಯ ನೀಡಬೇಕಿದ್ದ ಅಧಿಕಾರಿಗಳು, ಎಕರೆಗಟ್ಟಲೆ ಸರ್ಕಾರಿ ಜಾಗ ಕಬಳಿಸಿರುವ ಜಮೀನ್ದಾರರ ಪರ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಕಾರ್ಮಿಕರ ಆರೋಪ.
ಈಗ ಸರ್ಕಾರಿ ಜಮೀನುಗಳಲ್ಲಿ ಗುಡಿಸಲು ಕಟ್ಟಿಕೊಂಡಿರುವ ನಮಗೆ ಪಂಚಾಯಿತಿ ವ್ಯಾಪ್ತಿಯಿಂದ ಹೊರಗೆ ಎಂಬ ಕಾರಣವೊಡ್ಡಿ ಇದ್ದ ದಾಖಲೆಗಳನ್ನು ವರ್ಗಾವಣೆ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಯಾವುದೇ ದಾಖಲೆಗಳನ್ನೇ ಮಾಡಿಕೊಡುತ್ತಿಲ್ಲ ಎನ್ನುತ್ತಿದ್ದಾರೆ.
ಪಡಿತರ ಕೂಡ ಸಿಗುತ್ತಿಲ್ಲ: ಕಳೆದ ಐದು ವರ್ಷಗಳಿಂದ ಕನಿಷ್ಠ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಗುವ ಪಡಿತರ ಕೂಡ ಸಿಗುತ್ತಿಲ್ಲ. ಹೈಸೊಡ್ಲೂರಿನಲ್ಲಿ ಮುಕ್ಕಾಲು ಎಕರೆ ಭೂಮಿಯಲ್ಲಿ 74 ಕುಟುಂಬಗಳು ಶೆಡ್ ಕಟ್ಟಿಕೊಂಡು ವಿದ್ಯುತ್, ರಸ್ತೆ, ಕುಡಿಯುವ ನೀರು ಸೇರಿದಂತೆ ಯಾವುದೇ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಹೀನಾಯ ಬದುಕು ನಡೆಸುತ್ತಿದ್ದೇವೆ ಎನ್ನುತ್ತಾರೆ ಕಾರ್ಮಿಕ ನಿವಾಸಿಗಳು.
ಅಧಿಕಾರಿಗಳು ಕ್ಯಾರೇನ್ನುತ್ತಿಲ್ಲ: ಒಂದು ಸ್ವಂತ ಮನೆ ನಿರ್ಮಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದು ತಪ್ಪಾ ಎಂದು ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ. ನಮ್ಮ ವಿವಿಧ ದಾಖಲೆಗಳನ್ನು ಮಾಡಿಕೊಡುವಂತೆ ಶಾಸಕರು, ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ.
ಇದರಿಂದ ಬೇಸತ್ತು ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ವಿರುದ್ಧ ಈ ಕಾರ್ಮಿಕ ಕುಟುಂಬಗಳು ಲೋಕಾಯುಕ್ತರಿಗೆ ದೂರು ನೀಡಿವೆ. ನಮ್ಮ ದಾಖಲೆ ಮಾಡಿಕೊಡುವಂತೆ ಮನವಿ ಕೊಟ್ಟು, ನಮ್ಮ ಮನವಿ ಪತ್ರಗಳೇ ಮುಗಿದು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗಿನಲ್ಲಿ ಎಷ್ಟೋ ವರ್ಷಗಳಿಂದ ಕಾರ್ಮಿಕರು ಕಾಫಿ ತೋಟದ ಲೈನ್ ಮನೆಗಳಲ್ಲಿ ಜೀವನ ಕಳೆಯುತ್ತಿದ್ದಾರೆ. ಕೆಲವು ಕುಟುಂಬಗಳು ಲೈನ್ ಮನೆಗಳಿಂದ ಹೊರಗೆ ಬಂದು ಟರ್ಪಾಲ್ ಕಟ್ಟಿಕೊಂಡು ಮಕ್ಕಳು ವಯಸ್ಕರು ಗರ್ಭಿಣಿಯರು ಮಳೆಗಾಲ ಚಳಿಗಾಲವೆನ್ನದೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂಓದಿ:ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ; ಶಾಸಕ ರೇಣುಕಾಚಾರ್ಯ ವಿರುದ್ಧ ಎಫ್ಐಆರ್