ಕೊಡಗು: ಮಳೆ ಹಾನಿ ಸ್ಥಳಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮಂಗಳೂರು ರಸ್ತೆಯಲ್ಲಿ ಕರ್ತೋಜಿ ಗ್ರಾಮದ ಬಳಿ ಗುಡ್ಡ ಕುಸಿತವಾಗಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಕೊಡಗು ಜಿಲ್ಲೆಯ ಕೊಯನಾಡುವಿನಲ್ಲಿರುವ ಗಣಪತಿ ದೇವಾಲಯದ ಸಮುದಾಯ ಭವನದಲ್ಲಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಅಳಲು ಆಲಿಸಿ ಎಲ್ಲ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಪರಿಹಾರ ನೀಡಲು ಕ್ರಮ: ಜುಲೈನಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆ ಆಗಿದೆ. ಇದೆಲ್ಲವನ್ನು ಪರಿಶೀಲನೆ ಮಾಡಿದ್ದೇನೆ. ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಶೇ 114ರಷ್ಟು ಹೆಚ್ಚು ಮಳೆ ಆಗಿದೆ. ಒಂದು ವಾರದಲ್ಲಿ ಹೆಚ್ಚು ಮಳೆ ಆಗಿದಿದ್ದರೆ, ತೊಂದರೆ ಅಧಿಕವಾಗಿದೆ. ಕೊಡಗಿನಲ್ಲಿ ಇಲ್ಲಿಯವರೆಗೆ ಮಳೆಯಿಂದ 2 ಮನೆಗಳು ಸಂಪೂರ್ಣ ನಾಶವಾಗಿವೆ.
ಅದಕ್ಕೆ 5 ಲಕ್ಷ ಪರಿಹಾರಕ್ಕೆ ನೀಡುವಂತೆ ಸೂಚಿಸಲಾಗಿದೆ. 15 ಮನೆಗಳಿಗೆ ತೀರ್ವ ಸ್ವರೂಪದ ಹಾನಿಯಾಗಿದ್ದು, 3 ಲಕ್ಷ ಪರಿಹಾರ ನೀಡಲಾಗುವುದು. 63 ಮನೆಗಳಿಗೆ ಸಾಧಾರಣ ಹಾನಿಯಾಗಿದ್ದು, 50 ಸಾವಿರ ಪರಿಹಾರ ಕೊಡಲಾಗುವುದು ಎಂದು ಸಿಎಂ ಹೇಳಿದರು.
ಎನ್‌ಡಿಆರ್‌ಎಫ್ ತಂಡಕ್ಕೆ ಸೂಚನೆ: ಎಲ್ಲ ಮನೆಗಳಿಗೂ 10 ಸಾವಿರ ಕೊಟ್ಟಿದೆ. ಗ್ರಾಮೀಣ ಹಾಗೂ ಮುಖ್ಯ ರಸ್ತೆ ಬಗ್ಗೆ ಮಾಹಿತಿ ಕೇಳಲಾಗಿದೆ. ಮೊದಲು ರಿಪೇರಿ, ನಂತರ ಸಂಪೂರ್ಣ ರಸ್ತೆ ನವೀಕರಣ ಮಾಡಲಾಗುವುದು. 2018ರ ನೆರೆ ವೇಳೆ ಕಟ್ಟಲು ಮುಂದಾದ ಮನೆಗಳಲ್ಲಿ 830 ಮನೆ ಕಟ್ಟಲಾಗಿದೆ. ಶೇ 95ರಷ್ಟು ಮನೆಗಳನ್ನು ಕಟ್ಟಲಾಗಿದ್ದು, ಜನ ವಾಸ ಮಾಡುತ್ತಿದ್ದಾರೆ.
ಒಂದೂವರೆ ತಿಂಗಳಲ್ಲಿ ಎಲ್ಲ 195 ಮನೆಗಳನ್ನ ಜನರಿಗೆ ಕೊಡಲಾಗುತ್ತದೆ. ಎನ್‌ಡಿಆರ್‌ಎಫ್ ತಂಡಕ್ಕೆ ಅಲರ್ಟ್ ಆಗಿ ಇರುವಂತೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ಇದರ ಜೊತೆಗೆ ಭೂ ಕಂಪನಗಳ ಸದ್ದು ಕೇಳಿ ಬರುತ್ತಿದೆ. ಭೂಕಂಪನದ ಬಗ್ಗೆ ತನಿಖೆ ಮಾಡಲು ರಾಷ್ಟ್ರೀಯ ಮಟ್ಟದ ತಂಡಗಳಿಗೆ ಹೇಳಲಾಗಿದೆ. ಮುಂದಿನ ತಿಂಗಳು ತಂಡಗಳು ಬಂದು ತನಿಖೆ ಮಾಡಲಿವೆ. ಇದರಲ್ಲಿ ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯದ ಜಿಯಾಲಜಿ ಡಿಪಾರ್ಟ್ಮೆಂಟ್ನವರು ಇರುತ್ತಾರೆ. ಅಮೃತ್ ವಿಶ್ವವಿದ್ಯಾಲಯ ಲ್ಯಾಂಡ್ ಸ್ಲೈಡ್ ಬಗ್ಗೆ ಡಾಕ್ಯುಮೆಂಟರಿ ಮಾಡಿದೆ. ಇದರ ಬಗ್ಗೆ ಕೂಡ ಪರಿಶೀಲನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಜಿಲ್ಲಾಧಿಕಾರಿ ಬಳಿ ಹಣ ಇದೆ ಎಲ್ಲವನ್ನು ನೋಡಿಕೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ನಾಳೆಯಿಂದ ತಗ್ಗಲಿದೆ ಮಳೆ.. ಕರಾವಳಿ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್'
ಗಂಜಿ ಕೇಂದ್ರದಲ್ಲಿ ಊಟ ತಿಂಡಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಬೇರೆ ಮನೆಗೆ ತೆರಳಿದ ನೆಂಟರಿಗೂ ದಿನಸಿ ಕೊಡಲಾಗುತ್ತದೆ. ಮಡಿಕೇರಿಯ ಎಲ್ಲ ತಹಶೀಲ್ದಾರರ ಬಳಿ 25 ಲಕ್ಷ ಹಣ ಮೀಸಲಿದೆ. ಎಲ್ಲ ಗ್ರಾ.ಪಂ.ಗಳಿಗೆ 50 ಸಾವಿರ ಹಣ ಬಿಡುಗಡೆ ಮಾಡಲಾಗಿದೆ. ಹಾರಂಗಿ ಜಲಾಶಯ ಹಿಂಭಾಗ ಹೂಳು ಎತ್ತಲು ಕ್ರಮಕೈಗೊಳ್ಳಲಾಗಿದೆ. ಇದಕ್ಕಾಗಿ 40 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.