ಕೊಡಗು : ಫ್ರೂಟ್ ಸಲಾಡ್ ಬೇಕಾ..? ಚರುಮುರಿ... ಪಾಪ್‌ಕಾರ್ನ್... ಕೇಕ್, ಜಾಮೂನು ಹೀಗೆ ತರಹೇವಾರಿ ತಿಂಡಿ-ತಿನಿಸುಗಳು ಒಂದೆಡೆ. ಇನ್ನೊಂದೆಡೆ ಮೆಣಸಿನಕಾಯಿ, ಸೌತೆಕಾಯಿ, ಗೆಣಸು ಸೇರಿದಂತೆ ಬಗೆ ಬಗೆಯ ತರಕಾರಿಗಳು.. ಇದು ಮಕ್ಕಳ ಸಂತೆಯಯಲ್ಲಿ ಕಂಡುಬಂದ ದೃಶ್ಯ.
ಮಡಿಕೇರಿಯ ಗಾಂಧಿ ಮೈದಾನದಲ್ಲಿ ದಸರಾ ಪ್ರಯುಕ್ತ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು. ಮಡಿಕೇರಿ ಸೇರಿದಂತೆ ಗ್ರಾಮೀಣ ಭಾಗಗಳ 70ಕ್ಕೂ ಹೆಚ್ಚು ಮಕ್ಕಳು 101 ಅಂಗಡಿಗಳನ್ನು ತೆರೆದು, ತರಕಾರಿ, ತಿಂಡಿ ತಿನಿಸು, ವಿವಿಧ ಅಲಂಕಾರಿಕ ಸಾಮಗ್ರಿಗಳನ್ನು ಮಾರಾಟ ಮಾಡಿದರು. 70ಕ್ಕೂ ಹೆಚ್ಚು ಮಕ್ಕಳು ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಮಕ್ಕಳ ಸಂತೆ ಜೊತೆ ದೇಶ ಪ್ರೇಮ ಸಾರುವ ಕಿತ್ತೂರು ರಾಣಿ ಚೆನ್ನಮ್ಮ, ಮಹಾತ್ಮ ಗಾಂಧೀಜಿ ವೇಷಭೂಷಣ ತೊಟ್ಟು ಡೈಲಾಗ್ ಹೇಳಿದ ವಿದ್ಯಾರ್ಥಿಗಳು ನೆರೆದಿದ್ದವರನ್ನು ರಂಜಿಸಿದರು.
ಒಟ್ಟಿನಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಮಂಜಿನ ನಗರಿಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಸರಾ ಮನರಂಜನೆ ಜೊತೆಗೆ ಒಂದಷ್ಟು ಸಾಮಾಜಿಕ ವ್ಯವಹಾರ ಕೌಶಲ್ಯದ ಅನಾವರಣಕ್ಕೆ ವೇದಿಕೆ ಸೃಷ್ಟಿಸಿತ್ತು.