ಕುಶಾಲನಗರ (ಕೊಡಗು): ಸೋಮವಾರಪೇಟೆ ತಾಲೂಕಿನ ಕುಶಾಲನಗರಕ್ಕೆ ಅನತಿ ದೂರದಲ್ಲಿರುವ ಎಸ್‌ಎಲ್‌ಎನ್ ಕಾಫಿ ಪಲ್ಪರ್ ಹಾಗೂ ಫಿಲ್ಟರ್ ಕಂಪನಿ ಎಡವಟ್ಟಿನಿಂದ ಕೂಡು ಮಂಗಳೂರು ಗ್ರಾಮದ ಬಹುತೇಕ ಕೊಳವೆ ಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಬರುತ್ತಿದೆ. ನೀರು ಕುಡಿಯಲೂ ಯೋಗ್ಯವಾಗಿಲ್ಲ. ಅಷ್ಟೇ ಅಲ್ಲದೆ, ಬೆಳೆಗಳ ಮೇಲೆಯೂ ಪರಿಣಾಮ ಬೀರುತ್ತಿದೆ.
ಕೂಡಿಗೆ ಸಮೀಪ 5 ವರ್ಷಗಳ ಹಿಂದೆ ಪ್ರಾರಂಭವಾದ ಈ ಕಂಪನಿಯಿಂದ ರಾಸಾಯನಿಕ ತ್ಯಾಜ್ಯ ಹೊರ ಬಿಡಲಾಗುತ್ತಿದೆ. ಉತ್ಪಾದಿಸುವ ಹಾನಿಕಾರಕ ಅಂಶಗಳನ್ನು ಇಂಗು ಗುಂಡಿ ನಿರ್ಮಿಸಿ ಕಾರ್ಖಾನೆ ಅದಕ್ಕೆ ಸಂಗ್ರಹಿಸುತ್ತಿದೆ. ಅದು ದಿನಗಳು ಕಳೆದಂತೆ ಕಂಪನಿ ರಾಸಾಯನಿಕ ಅಂಶ ಅಂತರ್ಜಲಕ್ಕೆ ಸೇರಿದೆ.
ಮಳೆ ಬಂದರೆ ಕೊಳಚೆ ನೀರೆಲ್ಲ ಜಮೀನುಗಳಿಗೆ ಹರಿದು ಬರುತ್ತದೆ. ಬೆಳೆಗಳೆಲ್ಲವೂ ಒಣಗುತ್ತಿವೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಗ್ರಾಮದಲ್ಲಿ 20 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿತ್ತು. ಎಲ್ಲ ಕೊಳವೆ ಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರೇ ಬರುತ್ತಿದೆ.
ತ್ಯಾಜ್ಯ ನೀರಿಗೆ ಬೆಳೆಗಳೆಲ್ಲ ಸಾಯುತ್ತಿರುವ ಪರಿಣಾಮ ಪ್ರತಿ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ಫಸಲು ಕೈಗೆ ಸಿಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳಿಗೆ ಹೇಳಿದರೆ ಗಮನ ಹರಿಸುತ್ತಿಲ್ಲ. ನೀರು ಕುಡಿದರೆ ಆರೋಗ್ಯವೂ ಕೆಡಲಿದೆ. ಇದಕ್ಕೆ ಯಾರೂ ಪರಿಹಾರ ಕೊಡುತ್ತಿಲ್ಲ. ಕಂಪನಿಯವರ ಗಮನಕ್ಕೆ ತಂದರೆ ಸರಿ ಮಾಡುತ್ತೇವೆ ಹೋಗಿ ಎನ್ನುತ್ತಾರೆಯೇ ವಿನಃ ಕೆಲಸ ಮಾಡುವುದಿಲ್ಲ. ಹೀಗಾದರೆ ಏನು ಮಾಡಬೇಕು. ಬೆಳೆಗಳಿಗೆ ಮಾಡಿರುವ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.