ಕೊಡಗು: ರಸ್ತೆಯಲ್ಲಿ ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾಗಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಜಿಲ್ಲೆಯ ಕುಶಾಲನಗರದಿಂದ ಸಿದ್ದಾಪುರ ಮಾರ್ಗವಾಗಿ ಕೇರಳ ಗಡಿಯ ಮಾಕುಟ್ಟ ಚೆಕ್‍ಪೋಸ್ಟ್ ಮೂಲಕ ಕೇರಳಕ್ಕೆ ಸಂಚರಿಸುತ್ತಿದ್ದ ಲಾರಿಯಿಂದ 60 ಕಿ.ಮೀ ಉದ್ದಕ್ಕೂ ಕೆಂಪು ಬಣ್ಣದ ದ್ರವ ಸೋರಿಕೆಯಾಗಿದೆ.
ರಾಸಾಯನಿಕ ದ್ರವ ಸೋರಿಕೆಯಾದ ಕಾರಣ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಕೆಮ್ಮು, ಕಣ್ಣುರಿ, ಗಂಟಲು ಕೆರೆತ ಶುರುವಾಗಿದೆ. ನಲ್ಯಹುದುಕೇರಿಯ ಶಾಲೆಗೆ ಹೋಗುವ ಮಕ್ಕಳು ಕೂಡಾ ಅಸ್ವಸ್ಥರಾಗಿದ್ದಾರೆ. ಮಕ್ಕಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾಳುಮೆಣಸಿನ ಸಾಸ್ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸಾಸ್ ಸೋರಿಕೆಯಿಂದ ಹೀಗಾಗುತ್ತಾ? ಎಂಬ ಅನುಮಾನ ಸಾರ್ವಜನಿಕರದ್ದು. ಈಗಾಗಲೇ ಲಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ದ್ರವವನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳುಹಿಸಿದ್ದಾರೆ.