ಕೊಡಗು: ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ಅವರು ಘೋಷಿಸಿರುವ ವಿಶೇಷ ಪ್ಯಾಕೇಜ್ ನಿಜಕ್ಕೂ ಸ್ವಾಗತಾರ್ಹ ವಿಷಯ ಎಂದು ವಿರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ ಪ್ರತಿಕ್ರಿಯಿಸಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಡಿಪಿಯ ಒಟ್ಟು ಮೊತ್ತದ ಶೇ. 10 ರಷ್ಟನ್ನು ವಿಶೇಷ ಪ್ಯಾಕೇಜ್ ಆಗಿ ಘೋಷಿಸಿರುವ ಪ್ರಪಂಚದ ನಾಲ್ಕನೆ ರಾಷ್ಟ್ರ ಭಾರತ. ಅಂದರೆ, 20 ಲಕ್ಷ ಕೋಟಿ ರೂಪಾಯಿಯನ್ನು ಘೋಷಿಸಲಾಗಿದ್ದು, ಇದರಿಂದ ದೇಶದ ಕಾರ್ಮಿಕರು, ರೈತರು ಮತ್ತು ಬಡವರು ಸೇರಿದಂತೆ ಎಲ್ಲ ವರ್ಗದ ಜನರ ಆತ್ಮಸ್ಥೈರ್ಯ ಹೆಚ್ಚಿಸಲು ಅನುಕೂಲವಾಗಲಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ಸಂಬಂಧ ವಿಸ್ತೃತವಾದ ಯೋಜನೆಗಳನ್ನು ಘೋಷಿಸಲಿದ್ದಾರೆ. ಈ ಸಂದರ್ಭ ರಾಜ್ಯದ ಕಾಫಿ ಬೆಳೆಗಾರರಿಗೂ ಅನುಕೂಲವಾಗಲಿದೆ ಎಂದರು.
ಇದೇ ವೇಳೆ, ಅವರು, ರಾಜ್ಯ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕೂಡ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸಲಿದ್ದಾರೆ. ಇವೆಲ್ಲವೂ ಜನರ ಆರ್ಥಿಕ ಮಟ್ಟವನ್ನು ಸುಧಾರಿಸಿ ಸ್ವಾವಲಂಬಿ ಭಾರತಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಅಭಿಪ್ರಾಯಪಟ್ಟರು.