ಕೊಡಗು: ಕೆಲಸ ಅರಸಿ ಬಂದು ಮೈಸೂರಿನಲ್ಲಿ ಸಿಲುಕಿದ್ದ 60ಕ್ಕೂ ಹೆಚ್ಚಿನ ಕೇರಳ ಮೂಲದ ಕಾರ್ಮಿಕರನ್ನು ಕೊಡಗಿನ ಮೂಲಕ ಸಾಗಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕುಶಾಲನಗರ ಚೆಕ್ ಪೋಸ್ಟ್ನಲ್ಲಿ ನಡೆಯಿತು. ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ಕುಶಾಲನಗರದ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಮೈಸೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ಮೂರು ಬಸ್ಗಳಲ್ಲಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತಿತ್ತು. ಈ ವೇಳೆ ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ಬಸ್ಗಳು ಬರುತ್ತಿರುವುದಕ್ಕೆ ಶಾಸಕ ಕೆ.ಜಿ.ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು. ಚೆಕ್ ಪೋಸ್ಟ್ನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದರೆ ಮೈಸೂರು ಕಮಿಷನರ್ ಈ ಬಸ್ಗಳನ್ನು ಕೊಡಗಿನ ಮೂಲಕ ಕೇರಳಕ್ಕೆ ಕಳುಹಿಸಲು ಮುಂದಾಗಿದ್ದು ಏಕೆ? ಇಷ್ಟು ಕಾರ್ಮಿಕರನ್ನು ಕೇರಳಕ್ಕೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕಾಫಿ, ಟೀಗೆ ಅಥವಾ ಊಟಕ್ಕೆ ಅಂತಾ ಇಳಿಯದೇ ಇರುವುದಿಲ್ಲ. ಈ ವೇಳೆ ಯಾರಿಗಾದ್ರೂ ವೈರಸ್ ಇದ್ದು, ಕೊಡಗಿನ ಜನತೆಗೆ ಹರಡಿದರೆ ಇದಕ್ಕೆ ಯಾರು ಹೊಣೆ? ಹೀಗಾಗಿ ಕೊಡಗಿನ ಮೂಲಕ ಕಾರ್ಮಿಕರನ್ನು ಸಾಗಿಸಬಾರದು ಎಂದು ಶಾಸಕ ಕೆ.ಜಿ.ಬೋಪಯ್ಯ ಬಸ್ಗಳನ್ನು ತಡೆ ಹಿಡಿದರು.