ಕೊಡಗು : ನೀರಿನಲ್ಲಿ ಮುಳುಗಿ ತಂದೆ ಮತ್ತು ಮಗ ಸಾವನ್ನಪ್ಪಿರುವ ದಾರುಣ ಘಟನೆ ಕುಶಾಲನಗರ ತಾಲ್ಲೂಕಿನ ಚಿಕ್ಕ ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ಅಯ್ಯಪ್ಪ ಮಾಲಾದಾರಿಯಾಗಿದ್ದ ತಂದೆ ಬೆಟ್ಟಗೇರಿ ಗ್ರಾಮದ ಮಣಿಕಂಠ (47), ಮಗ ಪ್ರೀತಂ (15) ಮೃತರು. ಇಂದು ಶಬರಿಮಲೆಗೆ ತೆರಳಬೇಕಿದ್ದ ಇಬ್ಬರು ಸ್ನಾನಕ್ಕೆಂದು ನೀರಿಗಿಳಿದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.
ಸಂಜೆ ದೇವಸ್ಥಾನದಲ್ಲಿ ದೊಡ್ಡ ಪೂಜೆ ಇದ್ದ ಕಾರಣ ನದಿಯಲ್ಲಿ ಸ್ನಾನ ಮಾಡಲು ನೀರಿಗಿಳಿದಿದ್ದಾರೆ. ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ಬದುಕಿಸಲು ತಂದೆ ಹಾರಿದ್ದಾರೆ. ಆದರೆ ತಂದೆಗೂ ಈಜಲು ಬರದ ಕಾರಣ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ. ಅಕ್ಕಪಕ್ಕದಲ್ಲಿ ಯಾರೂ ಇಲ್ಲದ ಕಾರಣ ಬದುಕಿಸಲು ಸಾಧ್ಯವಾಗಿಲ್ಲ.
ಮಾಹಿತಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಶವಗಳಿಗಾಗಿ ಶೋಧ ಕಾರ್ಯ ನಡೆಸಿದರು. ತಂದೆಯ ಶವ ಸಿಕ್ಕಿದ್ದು ಮಗನ ಶವಕ್ಕಾಗಿ ಶೋಧ ಕಾರ್ಯ ನಾಳೆ ನಡೆಯಲಿದೆ. ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಭದ್ರಾ ನದಿಯಲ್ಲಿ ನಡೆದಿತ್ತು ಇದೇ ರೀತಿಯ ದುರ್ಘಟನೆ : ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಸಮೀಪವಿರುವ ಭದ್ರಾ ನದಿಯಲ್ಲಿ ತಂದೆ-ಮಗ ಮುಳುಗಿ ಸಾವನ್ನಪ್ಪಿದ್ದರು. ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದ ಲೋಕೇಶ್ (40 ವರ್ಷ) ಮತ್ತು ಅಸವರ ಮಗ ಸಾತ್ವಿಕ್ (13 ವರ್ಷ) ಮೃತಪಟ್ಟಿದ್ದರು. ಸುಗ್ಗಿ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಲೋಕೇಶ್ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಬಂದಿದ್ದರು.
ಇದನ್ನೂ ಓದಿ: ವಾಟ್ಸಾಪ್ ಮೂಲಕ ವಿಡಿಯೋ, ಸಂದೇಶ ರವಾನೆ: ಕೊಡಗಿನಲ್ಲಿ ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
ಈ ವೇಳೆ ಮನೆ ಹತ್ತಿರವಿರುವ ಭದ್ರಾ ನದಿಯ ಬಳಿಗೆ ಸಂಜೆ ಸುಮಾರು 4 ಗಂಟೆಗೆ ಹೋಗಿದ್ದರು. ಬಂಡೆಯೊಂದರ ಮೇಲೆ ನಿಂತಿದ್ದ ಸಾತ್ವಿಕ್ ಕಾಲು ಜಾರಿ ನೀರಿಗೆ ಬಿದ್ದಿದ್ದ. ಮಗನನ್ನು ರಕ್ಷಿಸಲು ಲೋಕೇಶ್ ಸಹ ನದಿಗೆ ಹಾರಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಕುಟುಂಬಸ್ಥರ ಮುಂದೆಯೇ ಸಾವನ್ನಪ್ಪಿದ್ದರು. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇದನ್ನೂ ಓದಿ : ಕೊಡಗಿನ ಕಾಫಿ ಎಸ್ಟೇಟ್ ಕಾರ್ಮಿಕರ ಗೋಳು ಕೇಳುವವರಿಲ್ಲ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ