ಕೊಡಗು/ಸೋಮವಾರಪೇಟೆ: ಆಟೋ ಚಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ನವ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಆಟೋ ಚಾಲಕ ಅರುಣ್ (29) ಎಂಬಾತ ಜೀವನದಲ್ಲಿ ಜುಗುಪ್ಸೆಗೊಂಡು ಎರಡು ದಿನಗಳ ಹಿಂದೆ ಕಾವೇರಿ ನದಿಯ ದಡದಲ್ಲಿ ಮದ್ಯದೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂರು ದಿನಗಳ ಹಿಂದೆ ಮನೆಯಿಂದ ತೆರಳಿದ್ದ ಅರುಣ್ ನಂತರ ಹಿಂತಿರುಗಿ ಬಾರದ ಕಾರಣ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದರು. ಬೆಳಿಗ್ಗೆ ಅರುಣ್ ಮೃತದೇಹ ನದಿ ದಂಡೆಯಲ್ಲಿರುವುದನ್ನು ಕಂಡ ಸ್ಥಳೀಯರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳ ಪರಿಶೀಲಿಸಿ ಮೃತ ದೇಹವನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.