ಕೊಡಗು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಸಂಘರ್ಷಗಳೂ ಶುರುವಾಗಿವೆ. ಕೊಡಗಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತ ಹಾಗೂ ಪಂಚರತ್ನ ರಥದ ಚಾಲಕನ ಮೇಲೆ ಹಲ್ಲೆ ನಡೆದಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಚಿಕ್ಕತ್ತೂರಿನ ಅನು ಎಂಬವರ ಮೇಲೆ ಹಲ್ಲೆ ಮಾಡಿ ವಾಹನ ಚಲಾಯಿಸದಂತೆ ತಾಕೀತು ಮಾಡಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಚಿಕ್ಕತ್ತೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗಾಯಾಳು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಅನು ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸೋಮವಾರಪೇಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮುತ್ತಪ್ಪ ಮಾತನಾಡಿ, "ನಾವು ಮಾಡಿರುವ ಸಾಧನೆಗಳನ್ನು ಜನರಿಗೆ ಅರ್ಥೈಸುವ ನಿಟ್ಟಿನಲ್ಲಿ ಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿಯವರು ತಮ್ಮ ತೋಳ್ಬಲದಿಂದ ಈ ಕೃತ್ಯ ಎಸಗಿದ್ದಾರೆ. ನೀವು ಒಳ್ಳೆಯ ಕೆಲಸಗಳನ್ನು ಮಾಡಿದ್ದು ನಿಜವಾಗಿದ್ದರೆ ಜನರೇ ನಿಮಗೆ ಮತ ಹಾಕುತ್ತಾರೆ. ಅದನ್ನು ಬಿಟ್ಟು ಅಶಾಂತಿ ಮೂಡಿಸುವ ಕೆಲಸ ಮಾಡಬೇಡಿ. ನಿಮಗೆ ತಾಕತ್ತಿದ್ದರೆ ಚುನಾವಣೆ ಮುಖಾಂತರ ಗೆದ್ದು ಉತ್ತರ ಕೊಡಿ. ಇನ್ನು ಮುಂದೆ ಕ್ಷೇತ್ರದಲ್ಲಿ ಈ ರೀತಿಯ ಕೃತ್ಯ ಮಾಡಿದರೆ ನಾವೂ ಸಹ ಸಿದ್ದರಿದ್ದೇವೆ" ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ :3 ವರ್ಷದ ಬಳಿಕ 4 ದಿನ ಕೊಡಗಿನಲ್ಲಿ ವೈನ್ ಹಾಗೂ ಫಲಪುಷ್ಪ ಪ್ರದರ್ಶನ