ಮಡಿಕೇರಿ(ಕೊಡಗು): ಜಿಲ್ಲೆಯ ಕುಶಾಲನಗರದಲ್ಲಿ ಅಂಗನವಾಡಿಯೊಂದು ಕುಸಿದು ಬೀಳುವ ಹಂತ ತಲುಪಿದ್ದು, ಬೇರೆಡೆ ಜಾಗದಲ್ಲಿ ಮಕ್ಕಳನ್ನು ಕೂರಿಸಿ ಪಾಠ ಹೇಳಿಕೊಡುವಂತಾಗಿದೆ.
ಮನೆಯೇ ಮೊದಲ ಪಾಠಶಾಲೆ ಎನ್ನುತ್ತಾರೆ ಮನೆ ಬಿಟ್ಟರೆ ಔಪಚಾರಿಕ ಶಿಕ್ಷಣಕ್ಕೆ ಅಂಗನವಾಡಿಗಳೇ ಶಿಕ್ಷಣದ ಮೊದಲ ಹೆಜ್ಜೆ. ಇನ್ನು, ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುತ್ತೇವೆ ಎಂದು ಸರ್ಕಾರ ತಿಳಿಸಿದೆ. ಆದರೇ, ಕುಶಾಲನಗರ ಅಂಗನವಾಡಿಯು ಬೀಳುವ ಹಂತ ತಲುಪಿದ್ದು, ಈ ಕುರಿತು ಸರ್ಕಾರ ಗಮನ ಹರಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ರಿಪೇರಿ ಮಾಡಿಸಿದರೂ ಮತ್ತದೇ ದುಸ್ಥಿತಿ.. ಅಂಗನವಾಡಿಯನ್ನು ಹಲವು ವರ್ಷಗಳಿಂದ ಹಲವು ಬಾರಿ ರಿಪೇರಿ ಮಾಡಿಸಲಾಗಿದೆ. ಆದರೇ, ಮುದುಕಿಗೆ ಶೃಂಗಾರ ಮಾಡಿದಂತೆ ತೀರಾ ಹಳೆಯದಾದ ಅಂಗನವಾಡಿ ಕಟ್ಟಡವನ್ನು ಎಷ್ಟು ಬಾರಿ ರಿಪೇರಿ ಮಾಡಿದ್ರು ಅದು ಸರಿ ಆಗಿಲ್ಲ. ಹೀಗಾಗಿ ಅಂಗನವಾಡಿ ಹೆಂಚುಗಳು ಉದುರಿದ್ದು, ಅಂಗನವಾಡಿ ಬಿಟ್ಟು ಬೇರೊಂದು ಕೊಠಡಿಯಲ್ಲಿ ಕುಳಿತು ಮಕ್ಕಳು ಅಕ್ಷರಾಭ್ಯಾಸ ಮಾಡುವಂತಹ ಸ್ಥಿತಿ ಎದುರಾಗಿದೆ. ಆ ಕೊಠಡಿಯ ಗೋಡೆಯೂ ಕುಸಿದು ಬೀಳುವಂತಹ ಸ್ಥಿತಿಗೆ ತಲುಪಿದೆ. ಇದರಿಂದ ಮಕ್ಕಳ ಜೀವಕ್ಕೆ ಆಪತ್ತು ಎದಾರಾಗಿದೆ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕೂಡಲೇ ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.
ಇನ್ನು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಡಿಪಿಒ, ಸದ್ಯ ಅಂಗನವಾಡಿ ಒಳಗೆ ಯಾರು ಹೋಗದಂತೆ ತಿಳಿಸಿದ್ದಾರೆ. ಅದು ಬಿಟ್ಟರೆ ಪರ್ಯಾಯ ವ್ಯವಸ್ಥೆ ಏನಾದರೂ ಮಾಡುವ ಗೋಜಿಗೆ ಮಾತ್ರ ಮುಂದಾಗಿಲ್ಲ ಎಂದು ಜನರು ಆರೋಪಿಸಿದ್ದಾರೆ. ಅಂಗನವಾಡಿಯ ಗೋಡೆ, ಛಾವಣಿ ಎಲ್ಲವೂ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ. ಹೀಗಾಗಿ ಎಂಟು ಮಕ್ಕಳ ಪೈಕಿ ಕೇವಲ ಮೂರು ಮಕ್ಕಳಷ್ಟೇ ಅಂಗವನಾಡಿಗೆ ಬರುತ್ತಿದ್ದಾರೆ.
ಮೇಲ್ಛಾವಣಿ ದುರಸ್ತಿಗಾಗಿ ಹಣವನ್ನು ಈಗಾಗಲೇ ಮೀಸಲಿಡಲಾಗಿದೆ. ಮಳೆ ಜಾಸ್ತಿ ಇರುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತಂದು ಕೂಡಲೇ ನೂತನ ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸುತ್ತೇವೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದ್ದಾರೆ.
ಉಸ್ತುವಾರಿ ಸಚಿವರೇ ಎಚ್ಚೆತ್ತುಕೊಳ್ಳಿ.. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ದುಸ್ಥಿತಿಯಲ್ಲಿರುವ ಇಂತಹ ಅಂಗನವಾಡಿಗಳ ಬಗ್ಗೆ ಗಮನ ಹರಿಸಿ, ಶೀಘ್ರ ಪರಿಹಾರ ಕಲ್ಪಿಸಬೇಕಿದೆ.
ಇದನ್ನೂ ಓದಿ: ಸೋರುತಿಹುದು ಶಾಲೆ ಮಾಳಿಗೆ.. ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ! ವಿದ್ಯಾರ್ಥಿಗಳ ಗೋಳು ಕೇಳೊರ್ಯಾರು?