ವಿರಾಜಪೇಟೆ/ಕೊಡಗು: ಪಾಸ್ ಇದ್ದರೂ ರೈತರನ್ನು ಚೆಕ್‌ಪೋಸ್ಟ್ ಮೂಲಕ ಹೊರ ಬಿಡದ ಕಾರಣ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆದಿರುವ ಘಟನೆ ತಾಲೂಕಿನ ಆನೆಚೌಕೂರಿನಲ್ಲಿ ನಡೆದಿದೆ.
ರೈತರಿಗೆ ಬೆಳೆ ಸಾಗಿಸಲು ಬಿಡದ ಎಎಸ್‌ಐ ವಿರುದ್ಧ ಆಕ್ರೋಶಗೊಂಡಿರುವ ರೈತರು, ಹಸಿರು ಪಾಸ್ ಮೂಲಕ ಚೆಕ್‌ಪೋಸ್ಟ್‌ಗಳಲ್ಲಿ ರೈತರು ಹೋಗಲು ಅವಕಾಶ ನೀಡಲಾಗಿದೆ. ಹೀಗಿದ್ದರೂ ಪೊಲೀಸರು ಹೋಗಲು ಬಿಡುತ್ತಿಲ್ಲ. ಕೃಷಿ ಇಲಾಖೆಯ ಜಂಟಿ ನಿರ್ದೇಶಕರೇ ಅಧಿಕೃತವಾಗಿ ಪಾಸ್ ವಿತರಿಸಿದ್ದಾರೆ ಎಂದು ಹೇಳಿದರೂ ಎಎಸ್‌ಐ ದರ್ಪ ತೋರಿದ್ದಾರೆ. ಈ ಬಗ್ಗೆ ಡಿವೈಎಸ್‌ಪಿ ಅವರು ಕರೆ ಮಾಡಿ ರೈತರನ್ನು ಬಿಡುವಂತೆ ಸೂಚಿಸಿದ್ದರೂ ಕೇಳಿಲ್ಲ. ಲಾಠಿ ಚಾರ್ಚ್ ಮಾಡಬೇಕಾಗುತ್ತೆ ಅಂತೆಲ್ಲಾ ಗದರಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ನಿನ್ನೆಯೂ ಕೃಷಿ ಮಂತ್ರಿಗಳೊಂದಿಗೆ ಸಮಸ್ಯೆ ಹೇಳಿಕೊಂಡಿದ್ದೇವೆ. ಹೊರ ಜಿಲ್ಲೆಗಳಲ್ಲಿ ಭೂಮಿಯನ್ನು ಗುತ್ತಿಗೆ ಪಡೆದು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಈಗಾಗಲೇ ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೃಷಿ ಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಅವರೇನು ಬೇರೆ ಅನಾವಶ್ಯಕವಾಗಿ ಓಡಾಡುತ್ತಾರೆಯೇ ಎಂದು ರೈತ ಮುಖಂಡ ಮನು ಸೋಮಯ್ಯ ನೇತೃತ್ವದಲ್ಲಿ ರೈತರ ಆಕ್ರೋಶ ವ್ಯಕ್ತಪಡಿಸಿದರು.