ಮಡಿಕೇರಿ (ಕೊಡಗು): ಅಪೌಷ್ಠಿಕತೆ ಹೋಗಲಾಡಿಸಲು ಅಂಗನವಾಡಿ ಕಡೆಯಿಂದ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸುವ ಮೊಟ್ಟೆಗಳಲ್ಲಿ ಕೆಲವು ಕೊಳೆತಿರುವ ಆರೋಪ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೊಳೆತ ಮತ್ತು ವಾಸನೆ ಭರಿತ ಕೋಳಿ ಮೊಟ್ಟೆಗಳನ್ನು ವಿತರಿಸಿದ್ದಾರೆ ಕೂಡಿಗೆ ಭಾಗದ ಹಲವು ಫಲಾನುಭವಿ ಮಹಿಳೆಯೊಬ್ಬರು ದೂರಿದ್ದಾರೆ.
ಕೂಡಿಗೆ ಬಳಿಯ ಬಸವನತ್ತೂರು ಅಂಗನವಾಡಿ ಕೇಂದ್ರದಲ್ಲಿ ಕೂಡಿಗೆಯ ಬಾಣಂತಿ ಗೀತಾ ಎಂಬವರಿಗೆ ನೀಡಿದ್ದ ಮೊಟ್ಟೆಗಳನ್ನು ಬೇಯಿಸಿ ನೋಡಿದಾಗ ಅವುಗಳು ಕಪ್ಪು ಬಣ್ಣಕ್ಕೆ ತಿರುಗಿ ವಾಸನೆಯುಕ್ತವಾಗಿದ್ದವು ಎಂದು ಆರೋಪಿಸಿದ್ದಾರೆ. ಒಂದು ವೇಳೆ ಈ ಕೊಳೆತ ಸ್ಥಿತಿಯಲ್ಲಿನ ಕಳಪೆ ಮೊಟ್ಟೆಗಳನ್ನು ತಿಂದಿದ್ದಲ್ಲಿ ಬಾಣಂತಿಯರು ಹಾಗೂ ಶಿಶುಗಳ ಆರೋಗ್ಯದ ಸ್ಥಿತಿ ಯಾವ ದುಸ್ಥಿತಿಗೆ ತಲುಪುತ್ತಿತ್ತೋ ಏನೋ? ಎಂದು ಇಲ್ಲಿನ ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು: ಮಹಿಳೆಯರು ಹಾಗೂ ಎಳೆಯ ಹಸುಳೆಗಳ ಆರೋಗ್ಯದ ಹಿತದೃಷ್ಟಿಯಿಂದ ನೀಡುತ್ತಿರುವ ಪೌಷ್ಠಿಕ ಆಹಾರವಾದ ಉತ್ತಮ ಗುಣಮಟ್ಟದ ಮೊಟ್ಟೆಯನ್ನು ನೀಡುವಲ್ಲಿ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ನೊಂದ ಮಹಿಳೆಯರು ಒತ್ತಾಯಿಸಿದ್ದಾರೆ.
ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರ ಸೂಚನೆ: ಕೊಳೆತ ಮೊಟ್ಟೆ ವಿತರಣೆ ಮಾಡಿರುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸರಾಜು ಅವರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ಕೊಳೆತ ಮೊಟ್ಟೆ ಸರಬರಾಜು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬಾಣಂತಿಯರಿಗೆ ಪೌಷ್ಟಿಕಾಂಶ ದೊರಕಬೇಕು ಎನ್ನುವ ಉದ್ದೇಶದಿಂದ ಮೊಟ್ಟೆಗಳನ್ನು ನೀಡಲಾಗುತ್ತಿದೆ. ಆದರೆ, ಕೆಲವೆಡೆ ಕೊಳೆತ ಮೊಟ್ಟೆಗಳನ್ನು ನೀಡುತ್ತಿರುವುದು ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. ಈ ರೀತಿಯ ಬೇಜವಾಬ್ದಾರಿಯ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆ ಆದರೆ ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ, ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ..
ಕುಷ್ಟಗಿಯಲ್ಲೂ ಗರ್ಭಿಣಿಯರಿಗೆ, ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ: ಇನ್ನೊಂದೆಡೆ ಕುಷ್ಟಗಿ ಪಟ್ಟಣದ 21ನೇ ವಾರ್ಡ್‌ನ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಯರಿಗೆ ಹಾಗೂ ಅಪೌಷ್ಠಿಕಾಂಶದಿಂದ ಬಳಲುವ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ವಿತರಿಸಿದ್ದಕ್ಕೆ ಸ್ಥಳೀಯರು ಇತ್ತೀಚೆಗೆ (ಜುಲೈ 4-2020) ಆಕ್ರೋಶ ವ್ಯಕ್ತಪಡಿಸಿದ್ದರು.
ಫಲಾನುಭವಿಯೊಬ್ಬರಿಗೆ ವಿತರಿಸಿದ್ದ ಮೊಟ್ಟೆ ಒಡೆದಾಗ ಕೊಳೆತಿರುವುದು ಗೊತ್ತಾಗಿ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಕಾರ್ಯಕರ್ತೆಯನ್ನು ವಿಚಾರಿಸಿದ್ದರು. ಕೇಂದ್ರದಲ್ಲಿದ್ದ ಉಳಿದ ಮೊಟ್ಟೆಗಳನ್ನು ಪರಿಶೀಲಿಸಿದಾಗಲೂ ಕೊಳೆತ ಮೊಟ್ಟೆಯ ಅಸಲಿಯತ್ತು ಬೆಳಕಿಗೆ ಬಂದಿತ್ತು. ಇಂತಹ ಮೊಟ್ಟೆಗಳನ್ನು ಹೇಗೆ ತಿನ್ನುವುದು? ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ ಯಾರು ಹೊಣೆ? ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.