ಕೊಡಗು: ತೋಟವೊಂದರಲ್ಲಿ ಕಾಡುಹಂದಿ ಬೇಟೆಗೆ ಇರಿಸಿದ್ದ ಉರುಳಿಗೆ ಚಿರತೆ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ
ಹಾನಗಲ್ಲು ಶೆಟ್ಟಳ್ಳಿಯ ಚಂಗಪ್ಪ ಎಂಬುವವರು ಕಾಡುಹಂದಿ ಬೇಟೆಗೆಂದು ತಮ್ಮ ತೋಟದಲ್ಲಿ ಉರುಳು ಕಟ್ಟಿದ್ದು, ಇದೀಗ ಹಂದಿ ಬದಲಾಗಿ ಚಿರತೆ ಬಲಿಯಾಗಿದೆ. ಅಂದಾಜು 4 ವರ್ಷದ ಗಂಡು ಚಿರತೆಯ ಕುತ್ತಿಗೆ ಭಾಗಕ್ಕೆ ಉರುಳು ಸಿಕ್ಕಿದೆ.
ಈ ಚಿರತೆ ಚಿಕ್ಕತೋಳೂರು, ಹಣಕೋಡು ಸೇರಿದಂತೆ ಇನ್ನಿತರ ವ್ಯಾಪ್ತಿಯಲ್ಲಿ ಸಾಕಷ್ಟು ನಾಯಿ ಹಾಗೂ ಹಸುಗಳನ್ನು ಕೊಂದಿತ್ತು. ಇದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಪ್ರಯತ್ನಿಸಿತ್ತು. ಆದರೆ ಸಿಕ್ಕಿರಲಿಲ್ಲ. ಇದೀಗ ಉರುಳಿಗೆ ಸಿಲುಕಿ ಮೃತಪಟ್ಟಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.