ಕೊಡಗು: ಕಸ ವಿಲೇವಾರಿ ವಿಚಾರಕ್ಕಾಗಿ ನಡೆದ ಗಲಾಟೆಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಒಬ್ಬನ ಕೈಯನ್ನು ಕತ್ತರಿಸಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಕಾಲೂರು ಸಮೀಪದ ಕಾನೆಕಂಡಿ ನಿವಾಸಿ, ಗಾಳಿಬೀಡು ಅರಣ್ಯ ವಲಯದ ಗಾರ್ಡ್ ಆಗಿರುವ ಸಂಜೀವ (ಅಣ್ಣಪ್ಪ ರೈ) ಎಂಬುವರ ಕೈ ಕತ್ತರಿಸಲಾಗಿದೆ. ಆರೋಪಿ ತಿಮ್ಮಯ್ಯ (ಸಣ್ಣಕ್ಕ) ತಲೆಮರೆಸಿಕೊಂಡಿದ್ದಾನೆ.
ಗಾಯಾಳು ಸಂಜೀವ ಹಾಗೂ ಆರೋಪಿ ತಿಮ್ಮಯ್ಯ ಇಬ್ಬರು ಒಂದೇ ಊರಿನವರಾಗಿದ್ದಾರೆ. ತಿಮ್ಮಯ್ಯ ಮನೆ ಪಕ್ಕದಲ್ಲಿ ಕಸ ವಿಲೇವಾರಿ ಘಟಕ ಮಾಡಲು ಉದ್ದೇಶಿಸಲಾಗಿದೆ. ಇದೇ ವಿಚಾರ ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಕತ್ತಿಯಿಂದ ತಿಮ್ಮಯ್ಯನು ಸಂಜೀವನ ಎಡಗೈಗೆ ಬೀಸಿದ್ದಾನೆ. ಪರಿಣಾಮ ಎಡಗೈನ ಹಸ್ತದ ಪೂರ್ಣ ಭಾಗ ತುಂಡಾಗಿ ನೆಲಕ್ಕೆ ಬಿದ್ದಿದೆ.
ತುಂಡಾಗಿರುವ ಹಸ್ತದ ಭಾಗವನ್ನು ಜೋಡಿಸಲು ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಸಂಜೀವನನ್ನು ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಯುವತಿ ಮೇಲೆ ಆ್ಯಸಿಡ್ ದಾಳಿ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿ ನಾಗ.. ಕಾರಣ ಇದೇ ಅಂತೆ!