ಕೊಡಗು : ಜಿಲ್ಲೆಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಕುಶಾಲನಗರ ಹಾರಂಗಿ ಜಲಾಶಯದ ಉದ್ಯಾನವನಕ್ಕೆ ಕಾಡಾನೆ ನುಗ್ಗಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಹಾರಂಗಿ ಅಣೆಕಟ್ಟೆಗೆ ಹೊಂದಿಕೊಂಡಿರುವ ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಗಮಿಸಿದ ಕಾಡಾನೆ ಅಣೆಕಟ್ಟು ವ್ಯಾಪ್ತಿಗೆ ಆಗಮಿಸಿ ಅಲ್ಲಿನ ಉದ್ಯಾನವನದೊಳಗೆ ಅಡ್ಡಾಡಿದೆ.
ಹಾರಂಗಿ ಗ್ರಾಮದ ಕಿರು ಸೇತುವೆ ಬಳಿಯ ಕಾವೇರಿ ದೇವಾಲಯ ಮುಂಭಾಗ ಹಾರಂಗಿ ಅಣೆಕಟ್ಟು ಆವರಣದಲ್ಲಿರುವ ಗೇಟ್ ಒಂದನ್ನು ಒದ್ದು ಹೊರಕ್ಕೆ ಬಂದ ಕಾಡಾನೆ ಗ್ರಾಮದೊಳಗಿನಿಂದ ಹಾದು ಸಮೀಪದ ದೊಡ್ಡತ್ತೂರು ಅರಣ್ಯ ಪ್ರದೇಶದತ್ತ ತೆರಳಿದೆ. ಸಂಜೆ 7 ಗಂಟೆ ವೇಳೆಗೆ ನಡೆದ ಈ ಘಟನೆಯಿಂದ ಜಲಾಶಯಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಹಾಗೂ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಈ ಕಾಡಾನೆ ಸಕಲೇಶಪುರ ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಕಾರಣ ಕಳೆದ ಒಂದು ವರ್ಷದ ಹಿಂದೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾಡಾನೆ ಪತ್ತೆಗೆ ಕ್ರಮಕೈಗೊಂಡಿದೆ.
ಓದಿ : ಕೊಡಗು : ಭೂ ಕುಸಿತವಾದ ಪ್ರದೇಶಗಳಿಗೆ ಸಚಿವ ಬಿ.ಸಿ. ನಾಗೇಶ್ ಭೇಟಿ.. ಪರಿಹಾರದ ಭರವಸೆ