ಮಡಿಕೇರಿ(ಕೊಡಗು): ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿತವಾದ, ತಾಮ್ರದ ಹೊದಿಕೆಯೊಂದಿಗೆ ವಿಶೇಷವಾಗಿ ಕಾಣುವ ಬನ ಹೊಂದಿರುವ ಶಿವನ ದೇಗುಲ ಪತ್ತೆಯಾಗಿದೆ. ಸುತ್ತಲು ದಟ್ಟ ಕಾಡು ಆ ಕಾಡಿನ ಮಧ್ಯೆ 800 ವರ್ಷಗಳ ಪುರಾತನ ದೇವಾಲಯ ಇದೀಗ ಪತ್ತೆಯಾಗಿದ್ದು, ಊರಿನ ಜನರಿಗೆ ಅಚ್ಚರಿ ಮೂಡುವಂತೆ ಮಾಡಿದೆ.
ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕುಂಜಿಲಗೇರಿ, ಅರಪಟ್ಟು, ಬೆಳ್ಳುಮಾಡು, ಕಂಡಂಗಮರೂರು, ಬೆಪ್ಪುನಾಡು ಖ್ಯಾತಿಯ ಗ್ರಾಮವಾಗಿದ್ದ ಬೆಳ್ಳುಮಾಡು ಗ್ರಾಮದ ಸರ್ವೇ ಸಂಖ್ಯೆ 76/10ರಲ್ಲಿ ಇಂದಿನ ಬೆಳ್ಳುಮಾಡು ದವಸ ಭಂಡಾರ ಸಹಕಾರ ನಿಯಮಿತ ಕಟ್ಟಡದ ಹಿಂಭಾಗದ ಸ್ಥಳದಲ್ಲಿ ಸುಮಾರು 13ನೇ ಶತಮಾನದಲ್ಲಿ ನಾಡ ದೇವನಾಗಿ ಸ್ಥಿತನಾಗಿದ್ದ ಶ್ರೀ ಮಾದೇವರಪ್ಪ ದೇವನ ದೇಗುಲ ಇದಾಗಿದೆ ಎಂದು ಗುರುತಿಸಲಾಗಿದೆ.
2009ರಲ್ಲಿ ಮೊದಲು ಪತ್ತೆ: ಪುರಾತನವಾದ ಕಾಡು ಪದಾತಿ ದೇಗುಲವನ್ನು ಪಕ್ಕದ ಗ್ರಾಮಸ್ಥರು ಬೆಳಕಿಗೆ ತಂದಿದ್ದಾರೆ. ಗ್ರಾಮಸ್ಥರು ಶ್ರೀ ಮಾದೇವರಪ್ಪ ದೇವನ ನೆಲೆಯನ್ನು ಜೀರ್ಣೋದ್ಧಾರ ಮಾಡುವತ್ತ ಗ್ರಾಮಸ್ಥರು ಒಲವು ತೋರಿಸಿದ್ದಾರೆ. ಬೆಳ್ಳುಮಾಡು ಗ್ರಾಮದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿತವಾದ, ತಾಮ್ರದ ಹೊದಿಕೆಯೊಂದಿಗೆ, ಬಲಭಾಗದಲ್ಲಿ ಸೋಮಸೂತ್ರ ಹೊಂದಿರುವ ಶಿವನ ದೇಗುಲ ಇದು. ಪ್ರಕೃತಿಯಲ್ಲಾದ ಬದಲಾವಣೆಯಿಂದ ದೇಗುಲ ಶಿಥಿಲಾವಸ್ಥೆಗೆ ಬಂದಿದೆ. ದೇಗುಲ 2009 ರಲ್ಲಿ ಮೊಟ್ಟಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ನಂತರದಲ್ಲಿ ದೇಗುಲಕ್ಕೆ ತೆರಳಲು ದಾರಿಯಿಲ್ಲದ ಕಾರಣ ಅಭಿವೃದ್ಧಿ ಕಾಣದೆ ಯತಾಸ್ಥಿತಿಯಲ್ಲಿತ್ತು.
ಗ್ರಾಮದಲ್ಲಿ ಏಳಿಗೆ, ಅಭಿವೃದ್ಧಿ ಇಲ್ಲದೆ, ಸಾವುನೋವುಗಳು ಸಂಭವಿಸುತ್ತಿದ್ದವು. ಇದನ್ನು ಮನಗಂಡ ಗ್ರಾಮಸ್ಥರು ಸುಮಾರು 13 ವರ್ಷ ಹಿಂದೆ ಅಂದರೆ 2009ರ ಅಕ್ಟೋಬರ್ ತಿಂಗಳಲ್ಲಿ ಗ್ರಾಮದ ಶ್ರೀ ಅಯ್ಯಪ್ಪ ಶಾಸ್ತಾವು ದೇಗುಲದ ಜೀರ್ಣೋದ್ಧಾರ ಮಾಡುವ ಸಲುವಾಗಿ ದೇವಾಲಯದ ಅವರಣದಲ್ಲಿ ಪ್ರಶ್ನಾರ್ಥ ಕಾರ್ಯ ನಡೆಸಲಾಗಿತ್ತು. ಪ್ರಶ್ನೆಯ ವೇಳೆಯಲ್ಲಿ ಪುರಾತನ ದೇವಾಲಯವೊಂದು ಶಿಥಿಲಾವಸ್ಥೆಯಲ್ಲಿದೆ. ಆ ದೇಗುಲವನ್ನು ಪುನರ್ ನಿರ್ಮಾಣ ಮಾಡಿದಲ್ಲಿ ಮಾತ್ರ ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎಂದು ಪ್ರಶ್ನೆಯಲ್ಲಿ ತಿಳಿದು ಬಂದಿತ್ತು.
ಪ್ರಶ್ನೆ ಮಾಡುವ ವಿಮರ್ಶಕರು ನುಡಿದಂತೆ ದೇಗುಲದ ಕುರುಹುಗಳನ್ನು ಹುಡುಕಿ ತೆರಳಿದ ಸಂದರ್ಭದಲ್ಲಿ ದಟ್ಟ ಕಾಡು ಆವರಿಸಿಕೊಂಡು ಕಾಡಿನ ನಟ್ಟ ನಡುವೆ ಭಗ್ನಗೊಂಡ ದೇವಾಲಯ ಪತ್ತೆಯಾಗಿತ್ತು. ದಟ್ಟ ಕಾಡಿನ ಮಧ್ಯೆ ಇದ್ದ ಪುರಾತನ ದೇವಾಲಯವನ್ನು ಗ್ರಾಮಸ್ಥರೇ ಪತ್ತೆ ಹಚ್ಚಿ ಶುಚಿಗೊಳಿಸಿದ್ದರು.
ಈ ಆವರಣದಲ್ಲಿ ಪಾಳುಬಿದ್ದ ತೆರೆದ ಭಾವಿಯಲ್ಲಿ ತಡಕಾಡಿದಾಗ ಶಿವಲಿಂಗದ ಮೆಲ್ಭಾಗ, ಪಂಚಲೋಹದ ಗಣಪತಿ ವಿಗ್ರಹ, ಸಾಲಿಗ್ರಾಮ, ಗಂಟೆಯ ಮಣಿಗಳು, ದೇವರ ಕತ್ತಿ (ಕಡ್ತಲೆ) ಮುಂತಾದ ವಸ್ತುಗಳು ದೊರಕಿವೆ. ಅನತಿ ದೂರದಲ್ಲಿ ಲಿಂಗದ ಪಾಣಿಪೀಠ ಕೂಡ ದೊರಕಿದೆ. ದೇಗುಲದ ಮುಖ ಮಂಟಪ, ಪ್ರಾಂಗಣ, ಕೆಂಪು ಕಲ್ಲಿನಿಂದ ನಿರ್ಮಿತವಾದ ಬಲಿಪೀಠ ಮುಂತಾದವುಗಳು ಪತ್ತೆಯಾಗಿದೆ. ದೇಗುಲದ ಅವರಣಕ್ಕೆ ಹೊಂದಿಕೊಂಡಿರುವ ಕಾಫಿ ತೋಟದಲ್ಲಿ ಜೋಡಿ ನಾಗದೇವರ ಕಲ್ಲು, ದೇಗುಲದ ಗರ್ಭಗುಡಿಗೆ ಅಳವಡಿಸುವ ಕುಂಭ ಕಳಶ ಮುಂತಾದವುಗಳು ಪತ್ತೆಯಾಗಿವೆ.
800 ವರ್ಷ ಇತಿಹಾಸವಿರುವ ದೇಗುಲ: ದೇಗುಲವು ಸುಮಾರು 700-800 ವರ್ಷಗಳ ಇತಿಹಾಸ ಹೊಂದಿರಬಹುದು ಎಂದು ಊಹಿಸಲಾಗಿದೆ. ಉತ್ಖನನ ಮಾಡಿದಂತೆ ದೇಗುಲದ ಅವಶೇಷಗಳು ಮತ್ತು ಇತಿಹಾಸವನ್ನು ತಿಳಿಯಬಹುದಾಗಿದೆ. ಗರ್ಭಗುಡಿಯೊಳಗೆ ಶಿವಲಿಂಗ ಯುನಿಪೀಠ ಮತ್ತು ರುದ್ರ ಭಾಗ ದೊರೆತಿರುವುದರಿಂದ ಈಶ್ವರ ದೇವಾಲಯವೆಂದು ಗುರುತಿಸಲಾಗಿದೆ. ದೇಗುಲದ ಗರ್ಭಗುಡಿಯ ಪ್ರವೇಶದ್ವಾರದ ಮೆಟ್ಟಿಲುಗಳನ್ನು ಸೋಫಾನವ್ಯಾಳ ಅಂದರೆ ಸಿಂಹ ಮತ್ತು ಮೊಸಳೆ ಪ್ರಾಣಿ ಮುಖಗಳನ್ನು ಬಿಂಬಿಸಿ ಪೌರಾಣಿಕ ಹಿನ್ನೆಲೆ ಆಧರಿಸಿ ಕಟ್ಟಲಾಗಿದೆ. ಅಡಿಪಾಯದ ವಿನ್ಯಾಸದಲ್ಲಿ ಜಲದಿ ತ್ರೀಪಟ ಕುಮದ, ಕಂಟ ಮತ್ತು ಪಟ್ಟಿಕ ಭಿತ್ತಿ ಅವಲಂಭಿಸಿಕೊಂಡು ಅಡಿಪಾಯ ನಿರ್ಮಾಣ ಮಾಡಲಾಗಿದೆ.
ಬಲಭಾಗಕ್ಕಿರುವ ತೀರ್ಥ ಹರಿಯುವ ಕೊಂಡಿ: ಗರ್ಭಗುಡಿಯ ಮೇಲ್ಛಾವಣಿ ಮರ ಮತ್ತು ಹಿತ್ತಾಳೆ ಹಾಳೆಯಿಂದ ನಿರ್ಮಾಣವಾಗಿದೆ. ಎಲ್ಲಾ ಶಿವನ ದೇಗಲದಲ್ಲಿ ತೀರ್ಥ ಹರಿಯುವ ಕೊಂಡಿ ಎಡಭಾಗದಲ್ಲಿರುತ್ತದೆ. ಅದರೆ ಈ ದೇವಾಲಯದಲ್ಲಿ ಗರ್ಭಗುಡಿಯ ತೀರ್ಥ ಹರಿಯುವ ಕೊಂಡಿ ಅಥವಾ ಕೈ ಸೋಮಸೂತ್ರವು ಬಲಭಾಗದಲ್ಲಿ ನಿರ್ಮಾಣವಾಗಿದೆ. ಇದು ಕುತೂಹಲಕಾರಿ ಸಂಗತಿಯಾಗಿದೆ. ದೇಗುಲವು ಸಂಪೂರ್ಣವಾಗಿ ಸುಣ್ಣ ಮತ್ತು ಮರಳು ಹಾಗೂ ಕೆಂಪುಕಲ್ಲಿನಿಂದ ಕಟ್ಟಲಾಗಿದೆ. ಮಣ್ಣಿನಿಂದ ನಿರ್ಮಿತವಾದ ಹಂಚುಗಳನ್ನು ಬಳಕೆ ಮಾಡಲಾಗಿದೆ. ದೇಗುಲವನ್ನು ಇನ್ನಷ್ಟು ಅನ್ವೇಷಣೆ ಮಾಡಿದಲ್ಲಿ ಇತಿಹಾಸ ಅರಿಯಲು ಸಾಧ್ಯವಾಗುತ್ತದೆ.
ಒಟ್ಟಿನಲ್ಲಿ ಕೊಡಗು ತನ್ನಲ್ಲಿ ಸಾಕಷ್ಟು ಕೌತುಕದ ವಿಚಾರಗಳನ್ನು ಒಳಗೊಂಡಿದೆ. ಜಿಲ್ಲೆಯಲ್ಲಿ ಸಾಕಷ್ಟು ಪುರಾತನ ದೇವಾಲಯಗಳು ಕೂಡ ಇದ್ದು, ಇದರ ಪಟ್ಟಿಗೆ ಇದೀಗ ಈಶ್ವರ ದೇವಾಲಯವು ಸೇರಿಕೊಂಡಿದೆ. ದೇವಾಲಯದ ಬಗ್ಗೆ ಮತ್ತಷ್ಟು ಶೋಧ ನಡೆದಲ್ಲಿ ಮತ್ತಷ್ಟು ಕೌತುಕದ ವಿಚಾರಗಳು ಬೆಳಕಿಗೆ ಬರಲಿವೆ.
ಇದನ್ನೂ ಓದಿ: ನದಿಯಲ್ಲಿ ಮುಳುಗಿದ್ದ ಪುರಾತನ ಶಿವ ದೇವಾಲಯ ಪತ್ತೆ: ಈ ದೇವಸ್ಥಾನ ಕಟ್ಟಿಸಿದ್ದು ಯಾರು ಗೊತ್ತಾ?