ಕೊಡಗು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ, ಕೊರೊನಾ ರೂಪಾಂತರಿ ಡೆಲ್ಟಾ ಆತಂಕ ಮನೆ ಮಾಡಿದ್ದು, ಕೊಡಗು ಜಿಲ್ಲೆಯಲ್ಲಿ 19 ಹೊಸ ಡೆಲ್ಟಾ ವೇರಿಯಂಟ್ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿರುವ ವೇಳೆಯಲ್ಲಿ ಮತ್ತೆ ಈಗ ಜಿಲ್ಲೆಯಲ್ಲಿ ರೂಪಾಂತರಿ ಮಹಾಮಾರಿ ವೈರಸ್ ವಕ್ಕರಿಸಲು ರೆಡಿ ಅಗುತ್ತಿದೆ ಎಂದು ಡಿ ಹೆಚ್ಒ ವೆಂಕಟೇಶ್ ತಿಳಿಸಿದ್ದಾರೆ.
ನಿಮ್ಹಾನ್ಸ್ ನಿಂದ ಬಂದಿರುವ ವರದಿಯಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 19 ಡೆಲ್ಟಾ ವೇರಿಯಂಟ್ ಪ್ರಕರಣಗಳು ದೃಢಪಟ್ಟಿದೆ. ಇದುವರೆಗೆ ವ್ಯಾಕ್ಸಿನೇಷನ್ ಪಡೆದವರ ಬಳಿ ಮತ್ತು ಕೋವಿಡ್ ಟೆಸ್ಟ್ ಮಾಡಿಸಿದವರ ಬಳಿ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ಅದರಲ್ಲಿ 19 ಪ್ರಕರಣಗಳು ಪತ್ತೆಯಾಗಿದ್ದು, ಭಯ ಪಡುವ ಅಗತ್ಯವಿಲ್ಲ ಎಂದು ಡಿಹೆಚ್ಒ ಮಾಹಿತಿ ನೀಡಿದ್ದಾರೆ.
ಇನ್ನು ಜಿಲ್ಲೆಯ ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಡೆಲ್ಟಾ ವೇರಿಯಂಟ್ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೆಂಕಟೇಶ್ ಮನವಿ ಮಾಡಿದ್ದಾರೆ.