ಕೊಡಗು: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ತೀವ್ರ ಕಾವು ಪಡೆದು ಬಿಜೆಪಿ ಮತ್ತು ಕಾಂಗ್ರೆಸ್ ಕಿತ್ತಾಟಕ್ಕೆ ಕಾರಣವಾಗಿದೆ. ಆಗಸ್ಟ್ 26 ರಂದು ಉಭಯ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯೂ ಸಜ್ಜಾಗಿತ್ತು. ಆದರೆ, ಕಾನೂನು ಸುವ್ಯವಸ್ಥೆ ಕಾರಣ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಎರಡೂ ಪಕ್ಷಗಳ ಕಿತ್ತಾಟಕ್ಕೆ ಜಿಲ್ಲಾಡಳಿಯ ಬ್ರೇಕ್ ಹಾಕಿದೆ. ಆ.24 ರಿಂದ 27 ರ ಸಂಜೆ 6 ಗಂಟೆವರೆಗೆ ನಿಷೇಧ ಹೇರಲಾಗಿದೆ. ಇದರಿಂದ ಉಭಯ ಪಕ್ಷಗಳ ಪ್ರತಿಭಟನೆ, ಸಮಾವೇಶ ಮುಂದೂಡಲಾಗಿದೆ.
ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡಿದಾಗ ಕಾರಿಗೆ ಮೊಟ್ಟೆ ದಾಳಿ ನಡೆಸಲಾಗಿತ್ತು. ಇದು ಎರಡು ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು. ಇದರಿಂದ ಕೆರಳಿದ ಕಾಂಗ್ರೆಸ್ ಆಗಸ್ಟ್ 26 ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಭದ್ರತಾ ಲೋಪ ಆರೋಪದ ಮೇಲೆ ಎಸ್ಪಿ ಕಚೇರಿ ಮುತ್ತಿಗೆ ಹಾಕುವ ಬಗ್ಗೆ ನಿರ್ಧರಿಸಲಾಗಿತ್ತು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಜಿಲ್ಲೆಯಲ್ಲಿ ಜನಜಾಗೃತಿ ಸಭೆ ನಡೆಸಲು ಮುಂದಾಗಿತ್ತು. ದೊಡ್ಡ ಪ್ರಮಾಣದಲ್ಲಿ ಜನರು ಎರಡೂ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ, ಅನಾಹುತ ಮತ್ತು ಸಾಮಾನ್ಯ ಜನರಿಗೆ ತೊಂದರೆ ಉಂಟಾಗುವ ಕಾರಣ ಜಿಲ್ಲೆಯಲ್ಲಿ ಸಭೆ, ಸಮಾರಂಭ ಪ್ರತಿಭಟನೆಯನ್ನು ಮೂರು ದಿನಗಳ ಕಾಲ ನಿಷೇಧಿಸಿ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.
ಪ್ರತಿಭಟನೆ ಕೈಬಿಟ್ಟ ಕಾಂಗ್ರೆಸ್: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಕಾಂಗ್ರೆಸ್ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ, ಎಸ್ಪಿ ಕಚೇರಿ ಮುತ್ತಿಗೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಎಚ್ ಸಿ ಮಹದೇವಪ್ಪ, ಆ.26 ರಂದು ನಡೆಯಬೇಕಿದ್ದ ಎಸ್ಪಿ ಕಚೇರಿಗೆ ಮುತ್ತಿಗೆ ಪ್ರತಿಭಟನಾ ಕಾರ್ಯಕ್ರಮವನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಹೆಚ್ಚು ಅನಾಹುತ ಆಗಿದೆ ಜಿಲ್ಲೆಯ ಜನರ ಸಮಸ್ಯೆಗಳನ್ನು ಕೇಳಲು ಬಂದ ವಿರೋಧ ಪಕ್ಷದ ನಾಯಕರಿಗೆ ಮೊಟ್ಟೆ ಎಸೆದಿರುವುದು ಖಂಡನೀಯವಾಗಿದೆ. ಮೊಟ್ಟೆ ಎಸೆತದಿಂದ ಕೊಡಗಿನ ಜನರಿಗೆ ಅವಮಾನವಾಗಿದೆ. ಸಿದ್ದರಾಮಯ್ಯ ಬಂದಾಗ ಜಿಲ್ಲಾಡಳಿತ ಸರಿಯಾದ ಮುನ್ನೆಚರಿಕೆ ಕ್ರಮ ಕೈಗೊಂಡಿಲ್ಲ. ಇದು ಅವಮಾನಕರ ಸಂಗತಿಯಾಗಿದೆ. ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ ಎಂದು ಟೀಕಿಸಿದರು.
ಪ್ರತಿಭಟನೆ ಮಾಡುವುದು ಜನರ ಹಕ್ಕು. ಆದರೆ, ಮುಖ್ಯಮಂತ್ರಿ ನೆರಳಿನಂತಿರುವ ವಿರೋಧ ಪಕ್ಷದ ನಾಯಕನಿಗೆ ಅವಮಾನ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಯಾಗಿದೆ. ಸರ್ಕಾರದ ವೈಫಲ್ಯವನ್ನು ಖಂಡಿಸಲು ನಮಗೆ ಹಕ್ಕಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್.ಸಿ ಮಹಾದೇವಪ್ಪ ಮಡಿಕೇರಿಯಲ್ಲಿ ಹೇಳಿಕೆ ನೀಡಿದರು.
ಬಿಜೆಪಿ ಸಮಾವೇಶವೂ ಮುಂದಕ್ಕೆ: ಇತ್ತ ಕಡೆ ಬಿಜೆಪಿ ಕೂಡ ತಾನು ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶವನ್ನೂ ಮುಂದೂಡಿದೆ. ಜಿಲ್ಲೆಯಲ್ಲಿ ನಾಳೆಯಿಂದ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಸಮಾವೇಶ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೀರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಮಾಹಿತಿ ನೀಡಿದರು.
ಕಾನೂನು ಸುವ್ಯವಸ್ಥೆ ಕಾಪಾಡುವ ಜಿಲ್ಲಾಡಳಿತ ಈ ಕೆಲಸ ಮಾಡಿದೆ. ಪಕ್ಷದ ಹಿರಿಯರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಜನಜಾಗೃತಿ ಸಮಾವೇಶಕ್ಕೆ ಶೇ.80 ರಷ್ಟು ನಮ್ಮ ತಯಾರಿ ಮಾಡಲಾಗಿತ್ತು. ಕಾಂಗ್ರೆಸ್ ಏನು ಬೇಕಾದರೂ ಹೇಳಬಹುದು. ಮೊಟ್ಟೆ ಎಸೆದಿಲ್ಲ ಎಂದು ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ವಿಚಾರ ಈಗ ಅಪ್ರಸ್ತುತ ಎಂದು ಕೆ.ಜಿ.ಬೋಪಯ್ಯ ಹೇಳಿದರು.
ಓದಿ: ಪುನೀತ್ ಕಂಡ ನಾಲ್ಕು ಕನಸುಗಳ ಮಾಹಿತಿ ಬಿಚ್ಚಿಟ್ಟ ರಾಘವೇಂದ್ರ ರಾಜ್ ಕುಮಾರ್