ಕಲಬುರಗಿ : ಮಹಾರಾಷ್ಟ್ರದ ಉಮ್ಮರಗಾದಲ್ಲಿ ಲಾಕ್‌ಡೌನ್ ಪರಿಣಾಮ ಸಿಲುಕಿಕೊಂಡಿದ್ದ ರಾಯಚೂರು ಜಿಲ್ಲೆಯ ವಲಸೆ ಕಾರ್ಮಿಕರಿಗೆ ಕಲಬುರ್ಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಅವರು ನೆರವು ನೀಡಿದ್ದಾರೆ. ಲಿಂಗಸಗೂರು ತಾಲೂಕಿನ ವಿವಿಧ ಗ್ರಾಮದ 13 ಕಾರ್ಮಿಕರು ಉದ್ಯೋಗ ಅರಸಿ ಉಮ್ಮರಗಾಕ್ಕೆ ಹೋಗಿದ್ದರು. ಅಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾಯನಿರ್ವಹಿಸುತ್ತಿದ್ದ ಇವರು ಕೊರೊನಾ ಸೋಂಕಿನಿಂದ ಇಡೀ ದೇಶವೇ ಲಾಕ್‌ಡೌನ್ ಆದ ಕಾರಣ ಮರಳಿ ಊರಿನತ್ತ ಪ್ರಯಾಣ ಬೆಳೆಸಿದ್ದರು.
ಕೂಲಿ ಕಾರ್ಮಿಕರಿಗೆ ಆಹಾರದ ಜತೆಗೆ ವಾಹನ ಸೌಲಭ್ಯ ಕಲ್ಪಿಸಿದ ಜಿಪಂ ಅಧ್ಯಕ್ಷೆ.. ಭಾನುವಾರ ಕಲಬುರ್ಗಿ ತಾಲೂಕಿನ ಸಯ್ಯದ್ ಚಿಂಚೋಳಿಗೆ ಈ ಕಾರ್ಮಿಕರು ಆಗಮಿಸಿದ ವಿಷಯ ತಿಳಿದ ಸುವರ್ಣಾ ಹಣಮಂತರಾಯ ಮಾಲಾಜಿ ಅವರು, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಊಟ, ಕುಡಿಯುವ ನೀರು ವಿತರಿಸಿದರು. ಎಲ್ಲರಿಗೂ ಮಾಸ್ಕ್ ಹಂಚಿದ ಅವರು, ಇವರ ಆರೋಗ್ಯ ತಪಾಸಣೆ ನಡೆಸಿ ಅವರ ಸ್ವಗ್ರಾಮಕ್ಕೆ ತೆರಳಲು ವಾಹನದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಪಿ ರಾಜಾ ಮತ್ತು ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿದರು.ಕೂಲಿಕಾರ್ಮಿಕರಿಗೆ ವಾಹನ ವ್ಯವಸ್ಥೆ.. ತದ ನಂತರ ವಾಹನದ ಮೂಲಕ ಯುವ ಕಾರ್ಮಿಕರನ್ನು ರಾಯಚೂರು ಜಿಲ್ಲೆಯ ಲಿಂಗಸಗೂರಿಗೆ ತಲುಪಿಸಲಾಯಿತು.