ಕಲಬುರಗಿ: ಯುವಕರಿಬ್ಬರ ನಡುವಿನ ಜಗಳದಲ್ಲಿ ಓರ್ವ ಕೊಲೆಯಾದ ಘಟನೆ ಜಿಲ್ಲೆಯ ಕಾಳಮಂದರ್ಗಿ ಗ್ರಾಮದಲ್ಲಿ ನಡೆದಿದೆ. ಭರತ ವಾಡಿ (24) ಕೊಲೆಗೀಡಾದ ಯುವಕ. ಕಾಳಮಂದರ್ಗಿ ಗ್ರಾಮದ ಶಾಲೆಯ ಕಟ್ಟೆ ಮೇಲೆ ಮಲಗಿದ್ದ ಈತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರನಾಗಿ ಹತ್ಯೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಘಟನೆ ನಡೆದಿದೆ. ಅದೇ ಗ್ರಾಮದ ಹಾಗೂ ಮೃತನ ಸಂಬಂಧಿ ಮಲ್ಲಿಕಾರ್ಜುನ ವಾಡಿ ಎಂಬುವನು ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಭರತ ಎಂಬಾತ ಮಲ್ಲಿಕಾರ್ಜುನನ ಮೊಬೈಲ್ ಸಿಮ್ ತೆಗೆದು ಕಲ್ಲಿಗೆ ಉಜ್ಜಿ ನಿಷ್ಕ್ರಿಯಗೊಳಿಸಿದ್ದನಂತೆ. ಈ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಇಬ್ಬರೂ ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಗ್ರಾಮಸ್ಥರು ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಭರತ ರಾತ್ರಿ ಊಟ ಮುಗಿಸಿ ಶಾಲೆಯ ಕಟ್ಟೆಗೆ ಬಂದು ಮಲಗಿದ್ದಾನೆ. ಹೀಗೆ ಮಲಗಿದಾತ ಬೆಳಗ್ಗೆ ಹತ್ಯೆಯಾಗಿದ್ದಾನೆ. ತಲೆಯ ಭಾಗದಲ್ಲಿ ಗಂಭೀರ ಗಾಯವಾಗಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಪಕ್ಕದಲ್ಲೇ ಸೈಜುಗಲ್ಲು ಪತ್ತೆಯಾಗಿದೆ. ಭರತನ ತಾಯಿ ಬಂಗಾರಮ್ಮ ಕಮಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗೆ ಬಲೆ ಬೀಸಿದ್ದಾರೆ.
ಅರಣ್ಯ ನಾಶ, ಆರೋಪಿಗೆ ಶಿಕ್ಷೆ: ಕಾಯ್ದಿಟ್ಟ ಅರಣ್ಯ ಪ್ರದೇಶದ ಒಂದು ಎಕರೆ ಜಮೀನಿನಲ್ಲಿ ಅಕ್ರಮ ಸಾಗುವಳಿ ಮಾಡುವ ಸಲುವಾಗಿ ಆ ಪ್ರದೇಶದಲ್ಲಿ ಬೆಳೆದಿದ್ದ ಮರಗಳನ್ನು ಕಡಿದು ಬೇರುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಚಿಂಚೋಳಿ ಜೆಎಂಎಫ್‍ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎರಡು ಪ್ರಕರಣಗಳಲ್ಲಿ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಜೈಲುವಾಸ ಶಿಕ್ಷೆ ವಿಧಿಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ದತ್ತಕುಮಾರ ಜವಳಕರ ಆದೇಶಿಸಿದ್ದಾರೆ.
ಚಿಂಚೋಳಿ ತಾಲೂಕಿನ ಸಿದ್ದಾಪುರ ತಾಂಡಾದ ರಾಮಶೆಟ್ಟಿ ತಂದೆ ರಾಮು ರಾಠೋಡ ಎಂಬಾತ ಚಿಮ್ಮನಚೊಡ್ ಗ್ರಾಮದ ಬಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ 2017ರ ಜನವರಿ 21ರಂದು ನುಗ್ಗಿ ಅಲ್ಲಿಯ ಒಂದು ಎಕರೆ ಪ್ರದೇಶದಲ್ಲಿದ್ದ ವಿವಿಧ ಬಗೆಯ ಮರಗಳನ್ನು ಕಡಿದು ಹಾಕಿದ್ದನು. ಕಡಿದ ಮರಗಳಸಹಿತ ಬೇರುಗಳನ್ನು ಸುಟ್ಟಿದ್ದನು. ಇದಕ್ಕೆ ಸಂಬಂಧಿಸಿದಂತೆ ಆರಣ್ಯ ಇಲಾಖೆ ಆತನ ವಿರುದ್ಧ ಪ್ರಕರಣ ದಾಖಲಿಸಿತ್ತು.
ನಂತರ ಪ್ರಕರಣದ ತನಿಖೆ ನಡೆಸಿದ ಹುಮನಾಬಾದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸವರಾಜ ಎ.ಡಾಂಗೆ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ದತ್ತಕುಮಾರ ಅವರು ಆಪಾದಿತ ರಾಮಶೆಟ್ಟಿಗೆ ಒಂದು ಪ್ರಕರಣದಲ್ಲಿ 60 ಸಾವಿರ ರೂ.ದಂಡ, ದಂಡ ಪಾವತಿಗೆ ತಪ್ಪಿದ್ದಲ್ಲಿ 30 ದಿನ ಕಾಲ ಸಾದಾ ಶಿಕ್ಷೆ ಹಾಗೂ ಇನ್ನೊಂದು ಪ್ರಕರಣದಲ್ಲಿ ಎರಡು ಸಾವಿರ ರೂ. ದಂಡ, ದಂಡ ತಪ್ಪಿದ್ದಲ್ಲಿ ಏಳು ದಿನಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಬಾಬಾಸಾಬ ಎಸ್. ಕಣ್ಣಿ ವಾದ ಮಂಡಿಸಿದ್ದರು.
ಇದನ್ನೂಓದಿ:ಜಿಲ್ಲಾಸ್ಪತ್ರೆಯಲ್ಲಿ ತಾಯಿ ಪಕ್ಕ ಮಲಗಿದ್ದ 3 ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿನಾಯಿ!