ಕಲಬುರಗಿ: ಆ ಯುವಕ ಸಾಫ್ಟ್‌ವೇರ್ ಇಂಜಿನಿಯರ್. ಎಸಿ ರೂಮ್ನಲ್ಲಿ ಕುಳಿತು ಕೈತುಂಬಾ ಹಣ ಸಂಪಾದನೆ ಮಾಡಬಹುದಿತ್ತು. ಆದ್ರೆ ಕೃಷಿ ಆಸಕ್ತಿ ಈತನನ್ನು ಜಮೀನಿಗೆ ತಂದು ನಿಲ್ಲಿಸಿದೆ. ಬಹುಬೆಳೆ ಬೆಳೆಯುವ ಮೂಲಕ ಸಾಫ್ಟ್‌ವೇರ್ ಮಾತ್ರವಲ್ಲ, ಕೃಷಿಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಪ್ರಥಮ ಪ್ರಯತ್ನದಲ್ಲಿಯೇ ವಾಟರ್ ಆ್ಯಪಲ್ ಬೆಳೆ ಸಮೃದ್ಧವಾಗಿ ಬೆಳೆದು ಇತರ ಯುವಕರಿಗೆ ಮಾದರಿಯಾಗಿದ್ದಾರೆ.
ತೊಗರಿ ನಾಡು ಖ್ಯಾತಿಯ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕು ನೆಲೋಗಿ ಗ್ರಾಮದ ದೇವು ಮುದ್ದ ಎಂಬುವರೇ ಕೃಷಿಯಲ್ಲಿ ಸಾಧನೆ ಮಾಡಿದ ಯುವಕ. ಎಂಟು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿ ನಂತರ ತಮ್ಮೂರು ನೇಲೋಗಿಗೆ ಬಂದು ವಾಸವಾಗಿದ್ದಾರೆ. ಗ್ರಾಮಕ್ಕೆ ಬಂದವರೇ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಸಾಂಪ್ರದಾಯಿಕ ಒಂದೇ ಬೆಳೆಗೆ ಕಟ್ಟುಬೀಳದೆ ದೇವು ವಿಭಿನ್ನ ಪ್ರಯತ್ನದ ಮೂಲಕ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ.
ಐದು ಎಕರೆ ಹೊಲದಲ್ಲಿ 150ಕ್ಕೂ ಹೆಚ್ಚು ತೆಂಗಿನ ಗಿಡಗಳು, ನಾನಾ ಬಗೆಯ ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಆಯಾ ಸೀಜನ್ಗೆ ಅನುಗುಣವಾಗಿ ಕಟಾವು ಮಾಡಿ ಮಾರಾಟ ಮಾಡುವ ಮೂಲಕ ಕೈತುಂಬ ಹಣ ಮಾಡುತ್ತಿದ್ದಾರೆ.ಇಷ್ಟು ಮಾತ್ರವಲ್ಲ ಏನಾದರೂ ಹೊಸತು ಮಾಡುವ ಹೆಬ್ಬಯಕೆಯಿಂದ ವಾಟರ್ ಆ್ಯಪಲ್ ಹಣ್ಣು ಬೆಳೆದಿದ್ದಾರೆ. ಈ ಭಾಗದಲ್ಲಿ ವಾಟರ್ ಆ್ಯಪಲ್ ಅಂದ್ರೇ ಜನರಿಗೆ ಸರಿಯಾಗಿ ಗೊತ್ತಿಲ್ಲ. ಆದ್ರೂ ಯೂಟೂಬ್‌ನಲ್ಲಿ ಇದರ ಬಗ್ಗೆ ತಿಳಿದುಕೊಂಡು ತಮ್ಮ ಜಮೀನಿನಲ್ಲಿ ಈ ಹಣ್ಣು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ.
ಆರೋಗ್ಯಕ್ಕೆ ಹಿತಕರ ವಾಟರ್ ಆ್ಯಪಲ್: ವಾಟರ್ ಆ್ಯಪಲ್ ಆರೋಗ್ಯಕ್ಕೆ ಬಹು ಉಪಯೋಗಕಾರಿ ಹಣ್ಣು. ಹೃದಯ ಸಂಬಂಧಿ ಖಾಯಿಲೆ, ಕಿಡ್ನಿ ಸಮಸ್ಯೆ, ರಕ್ತದೊತ್ತಡ, ಸಕ್ಕರೆ ಖಾಯಿಲೆ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಆಯುರ್ವೇದಿಕ್ ಔಷಧಿಯಲ್ಲಿ ಈ ಹಣ್ಣು ಹೆಚ್ಚು ಬಳಕೆಯಾಗುತ್ತದೆ. ಸಾಮಾನ್ಯವಾಗಿ ಉಷ್ಣಾಂಶ ಹೆಚ್ಚಿರುವ ಪ್ರದೇಶದಲ್ಲಿ ಈ ಹಣ್ಣು ಬೆಳೆಯುತ್ತದೆ.
ಆಗ್ನೇಯ ಏಷ್ಯಾದ ದೇಶಗಳಾದ ಮಲೇಷ್ಯಾ, ಇಂಡೋನೇಷಿಯಾ, ಫಿಲಿಪೈನ್ಸ್ ಹಾಗೂ ಭಾರತ ಮತ್ತು ಶ್ರೀಲಂಕಾದ ಕೆಲವೆಡೆ ಈ ಬೆಳೆ ಬೆಳೆಯುತ್ತವೆ. ಕಲಬುರಗಿ ಭಾಗದಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣಕ್ಕೆ ಇಲ್ಲಿಯೂ ಸಮೃದ್ಧ ಬೆಳೆ ಬೆಳೆದಿದೆ. ಆದರೆ, ಈ ಭಾಗದ ಜನರಿಗೆ ವಾಟರ್ ಆ್ಯಪಲ್ ಹಣ್ಣಿನ ಪ್ರಯೋಜನ ಗೊತ್ತಿಲ್ಲ. ಹೀಗಾಗಿ, ಬಳಕೆ ಅತಿ ಕಡಿಮೆ ಇದೆ. ಫಸಲು ಚೆನ್ನಾಗಿ ಬಂದ್ರೂ ಮಾರ್ಕೆಟ್ ಇಲ್ಲದೆ ಯುವಕ ದೇವು ಕೊಂಚ ಕಂಗಾಲಾಗುವಂತಾಗಿದೆ.
ಸರ್ಕಾರ ಈ ಭಾಗದ ರೈತರಿಗೆ ವಾಟರ್ ಆ್ಯಪಲ್ ಹಣ್ಣು ಬೆಳೆಯಲು ಹೆಚ್ಚಿನ ಉತ್ತೇಜನ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಅನ್ನೋದು ಯುವ ರೈತ ದೇವು ಅವರ ಮನವಿಯಾಗಿದೆ. ಒಟ್ಟಿನಲ್ಲಿ ಹೊಸ ತರಹದ ಬೆಳೆ ಬೆಳೆಯುವ ಮೂಲಕ ಸಂಪಾದನೆಯ ನಿರೀಕ್ಷೆಯಲ್ಲಿರುವ ದೇವು, ಕುರಿ, ಕೋಳಿ ಸಾಕಾಣಿಕೆ ಮಾಡುವುದು ಸೇರಿದಂತೆ ಮತ್ತಷ್ಟು ಹೊಸ ಬಗೆಯ ಹಣ್ಣುಗಳನ್ನು ಬೆಳೆಯಬೇಕು ಎಂಬ ಆಸೆ ಹೊತ್ತಿದ್ದಾರೆ.
ಇದನ್ನೂ ಓದಿ: ಕೊಚ್ಚಿ ಹೋಗಿದ್ದ ಸೇತುವೆಗೆ ಬರಲಿಲ್ಲ ಮರುಜೀವ.. ಆತಂಕದಲ್ಲಿ ಕಾರ್ಲೇ ಗ್ರಾಮಸ್ಥರು..