ಕಲಬುರಗಿ: ತಂಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕರ ಗುಂಪೊಂದು ಆಕೆಯ ಅಣ್ಣನನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕಲಬುರಗಿಯ ಸುಲ್ತಾಪುರ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಕೊಟ್ಟಗಾರ್ ಗ್ರಾಮದ ನಿವಾಸಿ ಜಗದೀಶ್ ಕೊಲೆಯಾದ ಯುವಕ. ಈತ ಆಟೋ ಓಡಿಸಿಕೊಂಡು ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಕೊಲೆಯಾದ ಜಗದೀಶ್ಗೆ ಮೂವರು ಸಹೋದರಿಯರು. ಅದ್ರಲ್ಲಿ ಇಬ್ಬರ ಮದುವೆಯಾಗಿದ್ದು, ಮತ್ತೊಬ್ಬ ಸಹೋದರಿ ಸದ್ಯ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈಕೆ ಶಾಲೆಗೆ ಹೋಗಿ ಬರುವಾಗ ಅದೇ ಗ್ರಾಮದ ಕೆಲ ಯುವಕರು ಆಕೆಯನ್ನ ಚುಡಾಯಿಸಿದ್ದಾರೆ. ಅಷ್ಟೇ ಅಲ್ಲದೆ ಆ ಗುಂಪಿನಲ್ಲಿದ್ದ ಯುವಕನೊಬ್ಬ ಆಕೆಯನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಈ ವಿಷಯವನ್ನು ಬಾಲಕಿ ತನ್ನ ಅಣ್ಣ ಜಗದೀಶ್ ಗಮನಕ್ಕೆ ತಂದಿದ್ದಾಳೆ.
ಆಗ ಜಗದೀಶ್ ತನ್ನದೇ ಗ್ರಾಮದ ಯುವಕರಿಗೆ ಒಂದೆರಡು ಬಾರಿ ವಾರ್ನ್ ಮಾಡಿ ಇದೆಲ್ಲಾ ಸರಿ ಇರೋದಿಲ್ಲ ಅಂತಾ ಹೇಳಿದ್ದಾನೆ. ಅದನ್ನು ಕೇಳದ ಯುವಕರು ಹುಡುಗಿಯನ್ನ ಚುಡಾಯಿಸೋದು ಬಿಟ್ಟಿರಲಿಲ್ಲ. ಹಾಗಾಗಿ ಜಗದೀಶ್ ಕೇಳಲಿಕ್ಕೆ ಹೋದಾಗ ಒಂದೆರಡು ಬಾರಿ ಆತನ ಮೇಲೆ ಹಲ್ಲೆ ಮಾಡಿ ಕಳುಹಿಸಿದ್ದಾರೆ.
ಮತ್ತೆ ಕಳೆದ ನಾಲ್ಕೈದು ದಿನಗಳ ಹಿಂದೆ ಅದೇ ಯುವಕರ ಗುಂಪು ಜಗದೀಶ್ ಸಹೋದರಿಯನ್ನ ಚುಡಾಯಿಸಿದ್ದಾರೆ. ಬಳಿಕ ಜಗದೀಶ್ ಕೂಡ ಆ ಯುವಕರಿಗೆ ಮತ್ತೊಮ್ಮೆ ವಾರ್ನ್ ಮಾಡಿದ್ದಾನೆ. ಆದ್ರೆ ನಮ್ಮ ಪ್ರೀತಿಗೆ ಬಾಲಕಿಯ ಅಣ್ಣ ವಿಲನ್ ಆಗ್ತಿದ್ದಾನೆ ಅಂತಾ ಆತನಿಗೆ ಒಂದು ಗತಿ ಕಾಣಿಸೋಕೆ ಯುವಕರು ನಿರ್ಧಾರ ಮಾಡಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ.
ಜಗದೀಶ್ ಎಂದಿನಂತೆ ಮನೆಯಿಂದ ಆಟೋ ತೆಗೆದುಕೊಂಡು ಕಲಬುರಗಿಗೆ ಬಂದಾಗ ಕೆಲ ಯುವಕರ ಗುಂಪು ಜಗದೀಶ್ನ ಆಟೋ ಬಾಡಿಗೆಗೆ ಬುಕ್ ಮಾಡಿಕೊಂಡು ತಾಜ್ ಸುಲ್ತಾನಪುರ ರೈಲ್ವೆ ಸ್ಟೇಷನ್ ಬಳಿ ಕರೆದುಕೊಂಡು ಹೋಗಿ ಗಲಾಟೆ ಮಾಡಿ, ಬಳಿಕ ಜಗದೀಶ್ನನ್ನ ಕೊಲೆ ಮಾಡಿ ಆಟೋ ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.
ಘಟನೆ ಬಗ್ಗೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಂತಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಹೆತ್ತವರು, ಕೊಲೆ ಮಾಡಿದವರಿಗೆ ಹಿಡಿಶಾಪ ಹಾಕಿ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ.