ಕಲಬುರಗಿ : ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ ಆಚರಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಹಿರಿಯ ನ್ಯಾಯಾಧೀಶ ಬಿ.ಎನ್. ಜರಗು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೇವಲ ಮಕ್ಕಳ ರಕ್ಷಣೆ ಸಂಬಂಧಿಸಿದ ಕಾನೂನು ತಿದ್ದುಪಡಿ ಮಾಡಿದರೆ ಸಾಲದು, ಅದನ್ನು ಜಾರಿಗೆ ತರಬೇಕು. ನಮ್ಮ ಮಕ್ಕಳು ಮಾತ್ರ ಶಾಲೆಗೆ ಹೋಗಲಿ ಮತ್ತೊಬ್ಬರ ಮಕ್ಕಳು ನಮ್ಮ ಮನೆಯಲ್ಲಿ ದುಡಿಯಲಿ ಎಂಬ ಮನೋಭಾವ ಸರಿಯಲ್ಲ. ಎಲ್ಲ ಮಕ್ಕಳನ್ನು ಒಂದೆ ರೀತಿ ಕಾಣಬೇಕು. ಬಡ ಮಕ್ಕಳ ರಕ್ಷಣೆಗಾಗಿ ಜಾರಿಗೆ ಬಂದ ಕಾನೂನುಗಳನ್ನು ಸರಿಯಾಗಿ ಬಳಸಿಕೊಂಡು. ಮಕ್ಕಳನ್ನು ಬಾಲಕಾರ್ಮಿಕ ಪದ್ದತಿಯಿಂದ ಮುಕ್ತ ಗೋಳಿಸಬೇಕೆಂದು ಕರೆ ಕೊಟ್ಟರು.
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ 1986 ಹಾಗೂ ತಿದ್ದುಪಡಿ 2016 ಕುರಿತು ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್ ಸಜ್ಜತ್ ಜಾಜ್೯ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿಯಲ್ಲಿ ಉತೀರ್ಣಾರಾದ ಬಾಲಕಾರ್ಮಿಕ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಮಕ್ಕಳು ಭಾಗಿಯಾಗಿದ್ದರು.