ಸೇಡಂ : ಕೆಲಸ ಅರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗಿದ್ದ ರಾಜ್ಯದ ಜನ ಸಾಕಷ್ಟು ಸಿಲುಕಿಕೊಂಡಿದ್ದಾರೆ. ಸೇಡಂ ತಾಲೂಕಿನ ಕೆಲ ಮಂದಿ ತೆಲಂಗಾಣದ ಕರೀಂನಗರದಲ್ಲಿ ಸಿಲುಕಿದ್ದಾರೆ. ಮರಳಿ ತಮ್ಮ ಮನೆಗಳಿಗೆ ಬರಲಾಗದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೇಗಾದರೂ ತಮ್ಮನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಿ ಎಂದು ಬೇಡಿಕೊಳ್ತಿದ್ದಾರೆ.
ಇವರೆಲ್ಲಾ ಸೇಡಂ ತಾಲೂಕಿನ ಕೊಂತನಪಲ್ಲಿ ಹಾಗೂ ಬೊಂದೆಂಪಲ್ಲಿ ನಿವಾಸಿಗಳು. ಹೊಟ್ಟೆಪಾಡಿಗಾಗಿ ಕೂಲಿ ಅರಸಿ ಗುತ್ತಿಗೆದಾರನ ಮೂಲಕ ತೆಲಂಗಾಣದ ಗಡಿಯಾದ ಕರೀಂನಗರ ಜಿಲ್ಲೆಗೆ ಹೋಗಿದ್ದರು. ಕೊರೊನಾ ಹಿನ್ನೆಲೆ ಗಡಿಯಲ್ಲಿ ಬಿಗಿ ಭದ್ರತೆ ಹೆಚ್ಚಿಸಿದ ಪರಿಣಾಮ ಕೆಲಸ ಅರಸಿ ಹೋದ ಹತ್ತಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇದರಲ್ಲಿ ಪ್ರೆಗ್ನೆಂಟ್ ಒಬ್ಬರು ಕೂಡ ಸಿಲುಕಿದ್ದಾರೆ. ತಮ್ಮನ್ನ ತಮ್ಮ ತವರೂರುಗಳಿಗೆ ವಾಪಸ್ ಕಳುಹಿಸಿಕೊಡಿ ಎಂದು ಗೋಗರೆಯುತ್ತಿದ್ದಾರೆ.
ಗಡಿಯಿಂದಾಚೆ ಬಿಡದ ಪೊಲೀಸರ ನಡೆಯಿಂದ ಬೇಸತ್ತ ಕುಟುಂಬಗಳು ಅಡವಿಯಲ್ಲೇ ಗುಡಿಸಲು ಹಾಕಿಕೊಂಡು ನರಕಯಾತನೆ ಅನುಭವಿಸುತ್ತಿವೆ. ಸದ್ಯ ಕೆಲಸವೂ ಇಲ್ಲ, ಊಟಕ್ಕೂ ಗತಿಯಿಲ್ಲ. ಹೇಗಾದರೂ ಮಾಡಿ ತಮ್ಮನ್ನು ತಮ್ಮ ಊರುಗಳಿಗೆ ಕಳುಹಿಸಿಕೊಡಿ ಎಂದು ತಮ್ಮ ಅಳಲು ತೋಡಿಕೊಳ್ತಿದ್ದಾರೆ.