ಕಲಬುರಗಿ: ಅವರಿಬ್ಬರೂ ಪರಸ್ಪರ ಪ್ರೀತಿಸಿ ಕಳೆದ 8 ವರ್ಷಗಳ ಹಿಂದೆ ಮನೆಯವರ ವಿರೋಧದ ಮಧ್ಯೆಯೂ ರಿಜಿಸ್ಟರ್ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದುಕೊಂಡಂತೆ ಪ್ರೀತಿಯ ಮದುವೆ ಜೀವನ ಚೆನ್ನಾಗಿಯೇ ಇತ್ತು. ದಿನ ಕಳೆದಂತೆ ಗಂಡನ ಮನೆಯವರು ಅನ್ಯ ಜಾತಿಯವಳು ಅಂತ ಕಿರುಕುಳ ಕೊಡಲು ಆರಂಭಿಸಿದ್ದಾರೆ. ಆದ್ರೆ ಮಹಿಳೆ ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ಪೋಷಕರು ಕೊಲೆ ಮಾಡಿದ್ದಾರೆಂದು ಆರೋಪ ಮಾಡ್ತಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಸುಜಾತಾ ಮೃತ ಗೃಹಿಣಿ. ಕಳೆದ ಹಲವು ವರ್ಷಗಳಿಂದ ಕಲಬುರಗಿಯಲ್ಲಿ ವಾಸವಾಗಿದ್ದ ಸುಜಾತಾ, ನರ್ಸಿಂಗ್ ಮುಗಿಸಿ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ ಕಲಬುರಗಿಯ ತಾರಫೈಲ್ ನಿವಾಸಿ ಬೀಸರಾವ್ ಪರಿಚಯ ಆಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಮುಂದೆ ಪ್ರೀತಿಗೆ ತಿರುಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಲು ನಿರ್ಧರಿಸಿದ್ರು. ಆದ್ರೆ ಮನೆಯವರು ಇಬ್ಬರ ಮದುವೆಗೆ ಒಪ್ಪದ ಹಿನ್ನೆಲೆ ಜೇವರ್ಗಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆ ಮಾಡಿಕೊಂಡು ದಾಂಪತ್ಯ ಆರಂಭಿಸಿದ್ದರು.
ಗಂಡನ ಮನೆಯವರಿಂದ ಕಿರುಕುಳ ಆರೋಪ: ಮದುವೆ ಆದ ಕೆಲ ದಿನಗಳ ಬಳಿಕ ಎಲ್ಲವೂ ಸರಿಯಾಗಿಯೇ ಇತ್ತು. ಅಲ್ಲದೆ ಈ ದಂಪತಿಗೆ ಮುದ್ದಾದ ಮೂರು ಮಕ್ಕಳು ಕೂಡ ಇವೆ. ಆದ್ರೆ ದಿನ ಕಳೆದಂತೆ ಗಂಡನ ಮನೆಯವರು ಕಿರುಕುಳ ನೀಡಲು ಆರಂಭ ಮಾಡಿದ್ರು. ನೀನು ಅನ್ಯ ಜಾತಿಯವಳು, ನಮ್ಮ ಜಾತಿಯ ಹುಡುಗಿಯನ್ನು ಮದುವೆ ಮಾಡಿದ್ರೆ ವರದಕ್ಷಿಣೆ ಬರುತ್ತಿತ್ತು. ಆದ್ರೆ ನೀನು ಏನು ತಂದಿಲ್ಲ ಅಂತ ಗಂಡನ ಮನೆಯವರು ನಿತ್ಯ ಕಿರುಕುಳ ನೀಡ್ತಿದ್ರಂತೆ. ಕಿರುಕುಳ ಹಿನ್ನೆಲೆ ಮಹಿಳೆಯು ಹಲವು ಸಲ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದರಂತೆ. ಆದ್ರೆ ಹಿರಿಯರೆಲ್ಲ ಸೇರಿ ಇಬ್ಬರನ್ನು ಒಂದುಗೂಡಿಸಿ ರಾಜಿ ಪಂಚಾಯ್ತಿ ಮಾಡಿದ್ರು. ಇಷ್ಟಾದರೂ ಇವರ ಸಂಸಾರದಲ್ಲಿನ ಕಲಹ ಮಾತ್ರ ಸರಿಯಾಗಿರಲಿಲ್ಲವಂತೆ.
ಕಳೆದ ಹಲವು ದಿನಗಳಿಂದ ಗಂಡ, ಅತ್ತೆ ನಾದಿನಿಯರೂ ಸಹ ದಿನನಿತ್ಯ ಕಿರುಕುಳ ಕೊಡುತ್ತಿದ್ದರಂತೆ. ಶನಿವಾರ ಕೂಡ ನನ್ನ ಮಗಳಿಗೆ ಮಧ್ಯಾಹ್ನ ಫೋನ್ ಮಾಡಿದ್ದೆ. ಅಳುತ್ತ ಮಾತಾಡುತ್ತಿದ್ದಳು. ನನಗೆ ಎಲ್ಲರೂ ಸೇರಿ ಹೊಡೆಯುತ್ತಿದ್ದಾರೆ, ಬೈಯುತ್ತಿದ್ದಾರೆ. ನನಗೆ ಊಟ ಕೂಡ ಕೊಟ್ಟಿಲ್ಲ. ಮನೆಯಲ್ಲಿ ನನಗೆ ಯಾರು ಮಾತನಾಡ್ತಿಲ್ಲ ಅಂತ ಹೇಳಿದ್ರು. ಎಲ್ಲವೂ ಸರಿ ಹೋಗುತ್ತೆ, ಇವತ್ತಿಲ್ಲ ನಾಳೆ ಅವರು ಕೂಡ ಸುಧಾರಣೆ ಆಗ್ತಾರೆ ಅಂತ ಹೇಳಿದ್ದೆ. ಆದ್ರೆ ಶನಿವಾರ ರಾತ್ರಿ ಮತ್ತೆ ಅವಳೊಂದಿಗೆ ಜಗಳ ಮಾಡಿ ಹಲ್ಲೆಗೈದು ಕೊಲೆ ಮಾಡಿದ್ದಾರೆ. ಆದರೆ ಆಕೆ ಪ್ರಾಣ ಹೋದ ಮೇಲೆ ಎಲ್ಲಿ ನಮ್ಮ ಮೇಲೆ ಬರುತ್ತೆ ಅಂತ ಗಂಡನ ಮನೆಯವರು, ಆಕೆಗೆ ನೇಣು ಹಾಕಿದ್ದಾರೆ. ಬೆಳಗ್ಗೆ ನಮಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಹುಷಾರ್ ಇಲ್ಲ, ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ ಬನ್ನಿ ಅಂತ ಫೋನ್ ಮಾಡಿದ್ದಾರೆ. ಈಗ ಆಸ್ಪತ್ರೆಗೆ ಬಂದು ನೋಡಿದ್ರೆ ಮಗಳು ಸಾವನ್ನಪ್ಪಿರುವುದು ಗೊತ್ತಾಗಿದೆ ಅಂತಾರೆ ಪೋಷಕರು.
ತಾಯಿ ಇಲ್ಲದೆ ತಬ್ಬಲಿಯಾದ ಮಕ್ಕಳು: ಮನೆ ಅಂದ್ಮೇಲೆ ಸಣ್ಣ ಪುಟ್ಟ ಜಗಳ ಆಗೋದು ಸಹಜ. ಶನಿವಾರ ಕೂಡ ಸುಜಾತಾ ಮನೆಯಲ್ಲಿ ಜಗಳ ಆಗಿತ್ತು. ಆದ್ರೆ ರಾತ್ರಿ ಎಲ್ಲರೂ ಸೇರಿ ಊಟ ಮಾಡಿ ಮಲಗಿದ್ದೇವೆ. ಆದ್ರೆ ಮಧ್ಯ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಸುಜಾತಾ ನೇಣಿಗೆ ಶರಣಾಗಿದ್ದಾರೆ. ತಕ್ಷಣ ನೋಡಿ ಆಕೆಯನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಅಷ್ಟೊತ್ತಿಗೆ ಆಕೆ ಜೀವ ಬಿಟ್ಟಿದ್ದಳು. ಆದ್ರೆ ಸುಮ್ಮನೆ ಸುಜಾತಾ ಮನೆಯವರು ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಅನ್ನೋದು ಗಂಡನ ಮನೆಯವರ ವಾದ. ಅದೇನೇ ಇರಲಿ ಬಾಳಿ ಬದುಕ ಬೇಕಿದ್ದವಳು ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ. ಏನೂ ಅರಿಯದ ಮುಗ್ಧ ಮಕ್ಕಳು ತಾಯಿ ಇಲ್ಲದೆ ತಬ್ಬಲಿ ಆಗಿವೆ.
ಇದನ್ನೂ ಓದಿ : ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಹೆತ್ತ ಮಕ್ಕಳನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ