ಕಲಬುರಗಿ : ಕೊರೊನಾ ಪೀಡಿತ ವೃದ್ಧೆಯ ಕುಟುಂಬಕ್ಕೆ ನೀರು ಹಾಗೂ ಅಗತ್ಯ ದಿನಸಿ ಪದಾರ್ಥಗಳನ್ನು ಒದಗಿಸುವ ಮೂಲಕ ಮಹಿಳಾ ಪಿಎಸ್ಐ ಒಬ್ಬರು ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಫರತಾಬಾದ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸೋಂಕಿತ ವೃದ್ದೆಯ ಕುಟುಂಬವನ್ನು ಅಕ್ಕಪಕ್ಕದವರು ಸೇರಿಸಿಕೊಳ್ಳದೆ ನೀರು ಸಹ ನೀಡದಿರುವುದನ್ನು ತಿಳಿದ ಫರತಾಬಾದ್ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಯಶೋದಾ ಕಟಕೆ ಅವರು ಪೊಲೀಸ್ ಠಾಣೆಯಿಂದ ನೀರು ಪೂರೈಕೆ ಮಾಡುವುದರ ಜೊತೆಗೆ ತಮ್ಮ ಸ್ವಂತ ದುಡ್ಡಿನಲ್ಲಿ ಅಗತ್ಯ ದಿನಸಿ ಪದಾರ್ಥಗಳನ್ನು ಕೊಡಿಸುವ ಮೂಲಕ ನೆರವಾಗಿದ್ದಾರೆ.
ನಿಮ್ಮ ಜೊತೆ ನಾನಿದ್ದೇನೆ ಹೆದರಬೇಡಿ. ಮಕ್ಕಳನ್ನು ಕ್ಷೇಮವಾಗಿ ನೋಡಿಕೊಳ್ಳಿ, ಸರಿಯಾಗಿ ಊಟ ಮಾಡಿ. ಎದೆಗುಂದದಿರಿ ಮತ್ತೆ ಏನಾದ್ರು ಅವಶ್ಯಕತೆ ಇದ್ರೆ ನನಗೆ ಕರೆ ಮಾಡಿ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.
ಸೋಂಕಿತೆಯ ಕುಟುಂಬವನ್ನು ಕೀಳರಿಮೆಯಿಂದ ಕಾಣುತ್ತಿದ್ದ ಬಡಾವಣೆ ಜನ ಹಾಗೂ ನೆರೆಹೊರೆಯವರಿಗೆ ಬುದ್ಧಿವಾದ ಹೇಳಿದ್ದಾರೆ. ಕೊರೊನಾ ಪೀಡಿತ ಕುಟುಂಬದವರನ್ನು ಕೀಳಾಗಿ ಕಾಣದೆ ಅವರೊಂದಿಗೆ ಮಾನವೀಯತೆಯಿಂದ ವರ್ತಿಸುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.