ಕಲಬುರಗಿ : ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಪುರುಷರಿಗೆ ಸರಿಸಮಾನರಾಗಿ ಸಮಾಜದಲ್ಲಿ ಮಹಿಳೆಯರು ಗುರುತಿಸಿಕೊಂಡಿದ್ದಾರೆ. ಸಹಜವಾಗಿ ಪರೀಕ್ಷಾ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವ ವಿದ್ಯಾರ್ಥಿನಿಯರು ಇದೀಗ ಉನ್ನತ ವ್ಯಾಸಂಗದಲ್ಲಿಯೂ ಮುನ್ನಡೆ ಸಾಧಿಸುವ ಮೂಲಕ ಪರೋಕ್ಷವಾಗಿ ದೇಶದ ಪ್ರಗತಿಗೆ ಕಾರಣರಾಗುತ್ತಿದ್ದಾರೆ.
ರಾಜ್ಯದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ : ಅಖಿಲ ಭಾರತ ಉನ್ನತ ಶಿಕ್ಷಣದ ಸಮಿಕ್ಷೆ (AISHE) ಅನ್ವಯ, ರಾಜ್ಯದಲ್ಲಿ 2011-12 ರಲ್ಲಿ 57,174 ವಿದ್ಯಾರ್ಥಿನಿಯರು ಹಾಗೂ 73,609 ಪುರುಷ ವಿದ್ಯಾರ್ಥಿಗಳು ಪಿಜಿ ಶಿಕ್ಷಣಕ್ಕೆ ದಾಖಲಾತಿ ಪಡೆದಿದ್ದರು. 2018-19ರಲ್ಲಿ ಮಹಿಳಾ ವಿದ್ಯಾರ್ಥಿನಿಯರ ದಾಖಲಾತಿ ಸಂಖ್ಯೆ ಬಹಳ ಏರಿಕೆ ಕಂಡಿದೆ.
ಸದ್ಯ ರಾಜ್ಯದಲ್ಲಿ 1,01,559 ವಿದ್ಯಾರ್ಥಿನಿಯರು ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಪುರುಷರ ಸಂಖ್ಯೆ ಬೆರಳೆಣಿಕೆಯಷ್ಟು ಹೆಚ್ಚಳವಾಗಿದೆ. ಪ್ರಸ್ತುತ 80841 ಪುರುಷ ವಿದ್ಯಾರ್ಥಿಗಳು ಪಿಜಿ ಶಿಕ್ಷಣ ಪಡೆಯುತ್ತಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲೇಗಿದೆ? : ರಾಜ್ಯದಲ್ಲಿ ಪಿಜಿ ಓದುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ವಿದ್ಯಾರ್ಥಿನಿಯರ ಸಂಖ್ಯೆ ಕೊಂಚ ಕಡಿಮೆ ಇದೆ. 2019-20 ರಲ್ಲಿ ಕಲಬುರಗಿ ಜ್ಞಾನಗಂಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಪಿಜಿ ಸೆಂಟರ್‌ಗಳು, ಕಾಲೇಜುಗಳಲ್ಲಿ 3,495 ಪುರುಷ ವಿದ್ಯಾರ್ಥಿಗಳು, 3,300 ವಿದ್ಯಾರ್ಥಿನಿಯರು ದಾಖಲಾತಿ ಪಡೆದಿದ್ದಾರೆ.
2020-21ರಲ್ಲಿ 3,516 ಪುರುಷ ವಿದ್ಯಾರ್ಥಿಗಳು ಮತ್ತು 3,060 ವಿದ್ಯಾರ್ಥಿನಿಯರು ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಪಿಜಿ ಶಿಕ್ಷಣ ಪಡೆಯುವಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರಲು ಕಾರಣ ಇಲ್ಲಿನ ಶೈಕ್ಷಣಿಕ, ಆರ್ಥಿಕ ವಾತಾವರಣ ಅನ್ನೋದು ತಜ್ಞರ ಅನಿಸಿಕೆ ಆಗಿದೆ.
ಶಿಕ್ಷಣ ಹೆಚ್ಚಾದಂತೆ ಬಾಲ್ಯ ವಿವಾಹ ಕಡಿತಗೊಳ್ಳುತ್ತಿದೆ. ಕುಟುಂಬದ ತಲಾ ಆದಾಯ ಹೆಚ್ಚಳವಾಗುತ್ತದೆ. ಹೀಗೆ ನಾನಾ ರೀತಿಯಿಂದ ಕುಟುಂಬದ ಜೊತೆಗೆ ದೇಶದ ಆರ್ಥಿಕತೆ ಉತ್ತಮವಾಗುತ್ತಿದೆ ಅನ್ನೋದು ಆರ್ಥಿಕ ಮತ್ತು ಶಿಕ್ಷಣ ತಜ್ಞೆ ಸಂಗೀತಾ ಕಟ್ಟಿಮನಿ ಅವರ ಅನಿಸಿಕೆ.
ಏಕೆ ಹೆಚ್ಚಳ? : ಕುಟುಂಬಸ್ಥರ ಬೆಂಬಲದ ಜತೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಹಿನ್ನೆಲೆ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. 2018ರ ಆಯವ್ಯಯದಲ್ಲಿ ಹೇಳಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿನಿಯರಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಅದಕ್ಕಾಗಿ 2020-21ನೇ ಸಾಲಿನ ಬಜೆಟ್‌ನಲ್ಲಿ 48.85 ಕೋಟಿ ರೂ. ಅನುದಾನ ನೀಡಿದೆ. ಇದು ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಆರ್ಥಿಕ ಸಮೀಕ್ಷೆ ಹೇಳುತ್ತಿದೆ.
ಇದನ್ನೂ ಓದಿ: ಉನ್ನತ ಶಿಕ್ಷಣ ಪಡೆಯುವಲ್ಲಿ ಮಹಿಳೆಯರದ್ದೇ ಮೇಲುಗೈ
ಕಲಬುರಗಿ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಇನ್ನಷ್ಟು ಹೆಚ್ಚಿನ ಒತ್ತು ನೀಡುವುದು ಅಗತ್ಯವಿದೆ. ಶೈಕ್ಷಣಿಕವಾಗಿ ಹಿಂದುಳಿದ ಈ ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಆರ್ಥಿಕತೆ ಸುಧಾರಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಿ ಉನ್ನತ ಶಿಕ್ಷಣಕ್ಕೆ ಮತ್ತಷ್ಟು ಪೂರಕ ವಾತಾವರಣ ನಿರ್ಮಾಣ ಮಾಡಿ ಕೊಟ್ಟರೆ ರಾಜ್ಯದ ಇತರೆ ಜಿಲ್ಲೆಯಂತೆ ಕಲಬುರಗಿ ಜಿಲ್ಲೆಯಲ್ಲಿಯೂ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗಲಿದೆ.