ಕಲಬುರಗಿ: ಧೈರ್ಯ ಇದ್ದರೆ ಗೃಹ ಇಲಾಖೆಗೆ ವಾರ್ನ್ ಮಾಡಿ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರೀಯಾಂಕ್ ಖರ್ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಕಾರು ಸೀಜ್ ಪ್ರಕರಣ ಹಿಂದೆ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎಂಬ ಗುತ್ತೇದಾರ್ ಆರೋಪಕ್ಕೆ ಪ್ರೀಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ಬೆಟಿಂಗ್ ದಂಧೆಕೋರರನ್ನು ಒದ್ದು ಒಳಗೆ ಹಾಕಿಸಬೇಕಿತ್ತು. ಅದನ್ನು ಬಿಟ್ಟು ನನಗೆ ವಾರ್ನ್ ಮಾಡಲು ಇವರ್ಯಾರು, ನನಗೆ ವಾರ್ನ್ ಮಾಡುವ ಬದಲು ಗೃಹ ಇಲಾಖೆಗೆ ವಾನ್೯ ಮಾಡಿ, ಬಿಜೆಪಿ ಹೈಕಮಾಂಡ್ಗೆ ವಾರ್ನ್ ಮಾಡಬೇಕಿತ್ತು ಎಂದು ಗುಡುಗಿದರು.
ನನಗೆ ಮಾಲೀಕಯ್ಯಾ ಗುತ್ತೇದಾರ್ ಬಗ್ಗೆ ಅಪಾರ ಗೌರವ ಇತ್ತು, ಈಗಲೂ ಅಲ್ಪಸ್ವಲ್ಪ ಇದೆ. ಸಾಹೇಬ್ರೆ ಹಿರಿಯರು ನನ್ನಿಂದ ಕಲಿಯುವಂತಾಗಬಾರದು. ನೀವು ನನಗೆ ಬೆನ್ನು ತಟ್ಟಿ ತನಿಖೆಗೆ ಆಗ್ರಹಿಸಬೇಕಿತ್ತು. ಆದರೆ, ನೀವು ಮಾಡುತ್ತಿರುವುದು ಏನು ಎಂದು ಪ್ರಶ್ನಿಸಿದರು.
ಜಿಲ್ಲೆಯ ಪೊಲೀಸರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಅದಕ್ಕಾಗಿಯೇ ಮಹಾರಾಷ್ಟ್ರ ಪೊಲೀಸರು ಗೌಪ್ಯವಾಗಿ ದಾಳಿ ಮಾಡಿದ್ದಾರೆ. ಮಹಾರಾಷ್ಟ್ರ ಪೊಲೀಸರ ಮೇಲೆ ಪ್ರಭಾವ ಬೀರುವಷ್ಟು ದೊಡ್ಡ ವ್ಯಕ್ತಿ ನಾನಲ್ಲ.
ಜಿಲ್ಲೆಗೆ ಒಂದೂ ಮಂತ್ರಿ ಸ್ಥಾನವನ್ನು ನೀಡಿಲ್ಲ, ತಾಕತ್ತಿದ್ರೆ ಅವರು ಬಿಜೆಪಿ ಹೈಕಮಾಂಡ್ಗೆ ವಾರ್ನ್ ಮಾಡಿ ಮಂತ್ರಿ ಸ್ಥಾನ ಕೊಡಿಸಲಿ.
ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಲಿ, ಅದನ್ನು ಬಿಟ್ಟು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡೋದ್ರಲ್ಲಿ ಅರ್ಥವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.