ಕಲಬುರಗಿ: ಆನೆಗುಂದಿಯ ವ್ಯಾಸರಾಜ ಯತಿಗಳ ವೃಂದಾವನ ಧ್ವಂಸವಾಗಿದ್ದು, ವಿಷಯ ತಿಳಿದ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಕಲಬುರಗಿಯ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಆನೆಗುಂದಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿಯ ತುಂಗಭದ್ರಾ ನಡುಗಡ್ಡೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಗುರುವಾಗಿದ್ದ ವ್ಯಾಸರಾಜ ಯತಿಗಳ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಒಂಭತ್ತು ಯತಿಗಳ ವೃಂದಾವನವಿರುವ ಈ ಧಾರ್ಮಿಕ ಸ್ಥಳದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಗುರುವಾಗಿದ್ದ ವ್ಯಾಸರಾಜ ಯತಿಗಳ ವೃಂದಾವನವಿದೆ. ದುಷ್ಕರ್ಮಿಗಳು ರಾತ್ರೋರಾತ್ರಿ ಇದನ್ನು ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸತ್ಯಾತ್ಮತೀರ್ಥ ಸ್ವಾಮೀಜಿ ಮುಂದಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಆನೆಗುಂದಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಕಲಬುರಗಿಯಲ್ಲಿ ಸತ್ಯಾತ್ಮತೀರ್ಥ ಸ್ವಾಮೀಜಿ ಇಂದು ಹಾಗೂ ನಾಳೆ ನಗರದ ರುಕ್ಮಿಣಿ ವಿಠ್ಠಲ ಮಂದಿರದ ವರ್ಧಂತಿ ಸಲುವಾಗಿ ರುಕ್ಮಿಣಿ ವಿಠ್ಠಲ್ ಮಂದಿರ ಉತ್ತರಾದಿ ಮಠದಲ್ಲಿ ಮುದ್ರಾಧಾರಣೆ, ವಿದ್ಯಾನಗರದ ಕೃಷ್ಣ ಮಂದಿರದಲ್ಲಿ ಸಂಸ್ಥಾನ ಪೂಜೆ ತೀರ್ಥಪ್ರಸಾದ, ಸಂಜೆ ನೂತನ ವಿದ್ಯಾಲಯದ ಸತ್ಯಪ್ರಮೋದ ಸಭಾಂಗಣದಲ್ಲಿ ಪ್ರವಚನ ನೀಡಬೇಕಾಗಿತ್ತು. ಆದ್ರೆ ಕಾರ್ಯಕ್ರಮ ಮಧ್ಯದಲ್ಲಿಯೇ ವೃಂದಾವನ ಧ್ವಂಸದ ವಿಷಯ ತಿಳಿದ ಸ್ವಾಮೀಜಿ, ಮುಂದಿನ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಆನೆಗುಂದಿಯತ್ತ ಪ್ರಯಾಣ ಬೆಳೆಸಿದ್ದಾರೆ ಅನ್ನೋದು ಭಕ್ತ ಮೂಲಗಳಿಂದ ತಿಳಿದುಬಂದಿದೆ.