ಕಲಬುರಗಿ: ಕನ್ನಡದ ಖಾಸಗಿ ಚಾನಲ್ನಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕದ ಡ್ಯಾನ್ಸ್ ಕಾಂಪಿಟೇಷನ್ಗೆ ಕಲಬುರಗಿ ಮೂಲದ ಯುವಕನೊಬ್ಬ ಆಯ್ಕೆಯಾಗಿ ಗಮನ ಸೆಳೆದಿದ್ದಾನೆ.
ಕಲಬುರಗಿ ನಗರದ ಸಂಜೀವ ನಗರದ ನಿವಾಸಿಯಾಗಿರುವ ವಿಶಾಲ್ ಕಲ್ಮುಡ್, ಮಲ್ಲಿಕಾರ್ಜುನ ಹಾಗೂ ಉಜಾಲಾ ದಂಪತಿಯ ಮಗ. ವಿಶಾಲ್ ತಂದೆ ಆಟೋ ಚಾಲಕರಾಗಿದ್ದು, ತಾಯಿ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡ್ತಾರೆ. ಈ ಯುವಕನ ಮನೆಯಲ್ಲಿ ಬಡತನ ಎಂಬುದು ಹಾಸು ಹೊದ್ದು ಮಲಗಿದೆ. ಹೀಗಾಗಿ ಈ ನೃತ್ಯಪಟು 10 ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾನೆ.
ವಿಶಾಲ್ಗೆ ಚಿಕ್ಕಂದಿನಿಂದಲೂ ಡ್ಯಾನ್ಸ್ ಬಗ್ಗೆ ಅಪಾರ ಪ್ರೀತಿ. ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ತನ್ನ ಡ್ಯಾನ್ಸ್ ಮೂಲಕ ಮೋಡಿ ಮಾಡ್ತಿದ್ದ. ಡ್ಯಾನ್ಸ್ ನಲ್ಲಿಯೇ ಏನಾದ್ರು ಸಾಧನೆ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದ ವಿಶಾಲ್, ಅದಕ್ಕಾಗಿ ರಾತ್ರಿ ಹಗಲು ಎನ್ನದೆ ಡ್ಯಾನ್ಸ್ ಮಾಡಿ ಮಾಡಿ ಸಜ್ಜಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡಿಕೆಡಿ ಮೆಗಾ ಆಡಿಷನ್ನಲ್ಲಿ ಪಾಲ್ಗೊಂಡು ತೀರ್ಪುಗಾರರ ಗಮನ ಸೆಳೆದಿದ್ದಾ ರೆ. ಬ್ರಹ್ಮ, ವಿಷ್ಣು, ಶಿವ ಎಂಬ ಹಾಡಿಗೆ ವಿಶೇಷ ಸ್ಟೆಪ್ ಹಾಕುವ ಮೂಲಕ ವಿಶಾಲ್, ತೀರ್ಪುಗಾರ್ತಿ ನಟಿ ರಕ್ಷಿತಾ ಅವರ ಕಣ್ತುಂಬಿ ಬರುವಂತೆ ಮಾಡಿದ್ದಾರೆ.
ಸ್ಟಂಟ್ ವೇಳೆ ಕಿವಿಗೆ ಪೆಟ್ಟು:
ವಿಶಾಲ್ ಆನಂದ ಎಂಬ ಡ್ಯಾನ್ಸ್ ಮಾಸ್ಟರ್ ಬಳಿ ಕಳೆದ ಮೂರು ವರ್ಷದಿಂದ ಡ್ಯಾನ್ಸ್ ತರಬೇತಿ ಪಡೆಯುತ್ತಿದ್ದಾರೆ. 'ಎ ಕ್ರೀವ್' ಎಂಬ ಡ್ಯಾನ್ಸ್ ಗ್ರೂಪ್ ಸೇರಿ ಚಿತ್ರದುರ್ಗ, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿದ್ದಾರೆ. ಒಮ್ಮೊಮ್ಮೆ ಇಡೀ ದಿನವನ್ನು ಡ್ಯಾನ್ಸ್ ಪ್ರ್ಯಾಕ್ಟಿಸ್ಗಾಗಿ ಮೀಸಲಿಡುವ ವಿಶಾಲ್ ಮಾಡುವ ಪ್ರತಿಯೊಂದು ಸ್ಟೆಪ್ಗಳು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಆದರೆ ಒಂದೊಮ್ಮೆ ನೃತ್ಯದಲ್ಲಿ ಸ್ಟಂಟ್ ಮಾಡುವ ವೇಳೆ ಕಿವಿಗೆ ಪೆಟ್ಟಾಗಿದ್ದು, ಈಗ ವಿಶಾಲ್ಗೆ ಎಡಭಾಗದ ಕಿವಿ ಸರಿಯಾಗಿ ಕೇಳಿಸುವುದಿಲ್ಲ
ಈ ಸಮಯದಲ್ಲಿ ಹಲವರು ಡ್ಯಾನ್ಸ್ ಬಿಟ್ಟುಬಿಡು ಎಂದು ಹೇಳಿದ್ದರು. ಆದರೆ ವಿಶಾಲ ಇದರಲ್ಲೆ ಸಾಧನೆ ಮಾಡುತ್ತೇನೆಂದು ಎಂದು ಪಣತೊಟ್ಟು ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸ್ಪರ್ಧೆಗೆ ಆಯ್ಕೆಯಾಗಿ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಬೆಳಗಿಸಲು ಹೊರಟಿದ್ದಾರೆ.
ಹೊಟ್ಟೆಪಾಡಿಗಾಗಿ ಅಪ್ಪನೊಂದಿಗೆ ಆಟೋ ಚಾಲನೆ:
ಡ್ಯಾನ್ಸ್ ನಲ್ಲಿ ಸಾಧಕನಾಗಿರುವ ವಿಶಾಲ ತನ್ನ ತಂದೆಯೊಂದಿಗೆ ಆಟೋ ಚಾಲಕನಾಗಿಯೂ ಕೆಲಸ ಮಾಡುತ್ತಾನೆ. ಬೆಳಗ್ಗೆ 5 ಗಂಟೆಗೆ ಎದ್ದು ನೃತ್ಯ ಅಭ್ಯಾಸ ಮಾಡಿ ನಂತರ ಆಟೋ ಓಡಿಸ್ತಾನೆ. ದುಡಿದ ಹಣದಲ್ಲಿ ಒಂದಿಷ್ಟು ಡ್ಯಾನ್ಸ್‌ಗೆ ಮೀಸಲಿಟ್ಟು ಉಳಿದ ಹಣವನ್ನು ಮನೆ ಖರ್ಚಿಗೆ ನೀಡುತ್ತಾನೆ.
ಇದನ್ನೂ ಓದಿ: ಸೀರೆಯಲ್ಲಿ ಮೈ ಜುಂ ಅನ್ನೋ ಡೇಂಜರಸ್ ಸ್ಟಂಟ್... ಯಾರು ಈ ಪಾರುಲ್ ಅರೋರಾ!?