ಕಲಬುರಗಿ: ಉಪಚುನಾವಣೆ ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾಣೆಯಾಗಿದ್ದರು. ಈಗ ಇದ್ದಕ್ಕಿದ್ದಂತೆ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಪಾಪ ಎಂದು ಹೆಚ್‌ಡಿಕೆ ಸರಣಿ ಟ್ವೀಟ್ ಸಂಬಂಧ ಕಲಬುರಗಿಯಲ್ಲಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಕಿಡಿ ಕಾರಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಜ್ಯದ ಮುಖ್ಯಮಂತ್ರಿ ಅನ್ನೋದನ್ನೂ ಮರೆತು ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಆದರೀಗ ಯಡಿಯೂರಪ್ಪ ಸರ್ಕಾದ ಬಗ್ಗೆ ಮಾತಾಡ್ತಿದ್ದಾರೆ. ಅವರ ಪ್ರಶ್ನೆಗಳಿಗೆ ನಮ್ಮ ನಾಯಕರು ಉತ್ತರ ಕೊಡ್ತಾರೆ ಎಂದು ಹೇಳಿದ್ರು.
ಪೌರತ್ವ ಮಸೂದೆ ವಿರೋಧ ಕುರಿತು ಮಾತಾಡಿದ ವಿಜಯೇಂದ್ರ, ಪೌರತ್ವ ಕಾಯ್ದೆ ನರೆ ರಾಷ್ಟ್ರಗಳಿಂದ ಬಂದ ಅಲ್ಲಿನ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವ ಉದ್ದೇಶ ಹೊಂದಿದೆ. ಸತ್ಯ ಸಂಗತಿ ಗೊತ್ತಿದ್ದರೂ ವಿದ್ಯಾವಂತರೆನಿಸಿಕೊಂಡವರೇ ಜನತೆಯ ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ. ಜನತೆಯನ್ನು ತಪ್ಪು ದಾರಿಗೆಳೆಯುವುದು ದೇಶ ದ್ರೋಹದ ಕೆಲಸ ಅಂತಾ ವಿರೋಧ ಪಕ್ಷದ ನಾಯಕರಿಗೆ ಚಾಟಿ ಬೀಸಿದ್ರು.
ಇನ್ನು ಯಡಿಯೂರಪ್ಪ ಯುವಕರ ವಿರೋಧಿ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ರು. ಪೌರತ್ವ ಕಾಯ್ದೆಯ ಸದುದ್ದೇಶ ಗೊತ್ತಿದ್ರೂ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಆಡಳಿದ ಬಗ್ಗೆ ವಿರೋಧ ಪಕ್ಷಗಳಿಗೆ ಹೇಳಲು ಏನು ಸಿಗದೆ ಈ ರೀತಿಯ ಹೇಳಿಕೆಗಳನ್ನ ನೀಡ್ತಾರೆ ಎಂದರು.