ಕಲಬುರಗಿ: ಇತಿಹಾಸ ಪ್ರಸಿದ್ಧ ನಿಡಗುಂದಾ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು.
ವಿವಿಧ ವಾದ್ಯ ಮೇಳದೊಂದಿಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ವೇಳೆ ಜೈಕಾರ ಹಾಕುತ್ತಿದ್ದ ಭಕ್ತರು ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಂಡರು.
ರಥೋತ್ಸವದಲ್ಲಿ ನಿಡಗುಂದಾ ಹಾಗೂ ಸುತ್ತಮುತ್ತಲಿನ ಹಲವು ಹಳ್ಳಿಗಳು ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಸೇಡಂ, ಚಿಂಚೋಳಿ ಹಾಗೂ ಕಲಬುರಗಿಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಜಾತ್ರೆಯ ವೇಳೆ ಬೆಂಕಿ ಕೆಂಡ ತುಳಿಯುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿದರು.
ಭಕ್ತರು ಮಾವಿನ ಹಣ್ಣು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ದೃಶ್ಯಾವಳಿ ಸಾಮಾನ್ಯವಾಗಿತ್ತು. ಜಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ವಿವಿಧ ಸಂಸ್ಥೆಗಳಿಂದ ದಾಸೋಹ ವ್ಯವಸ್ಥೆ ಮಾಡಲಾಯಿತು.