ಕಲಬುರಗಿ : ಶಿಕ್ಷಕರ ಪರಿಶ್ರಮ ಸಹಕಾರದಿಂದ ಕಲಬುರಗಿ ವಿಭಾಗದಲ್ಲಿ ವಠಾರ ಶಾಲೆ 31 ಸಾವಿರ ಗಡಿ ತಲುಪಿವೆ. ಕೋವಿಡ್ ಆತಂಕದಿಂದ ಶಾಲೆಗಳು ಆರಂಭ ಅನಿಶ್ಚಿತ ಎಂಬಂತಾಗಿದೆ. ಆದ್ದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯದಿರಲಿ ಹಾಗೂ ಬಡ ಮಕ್ಕಳು ಶಿಕ್ಷಣದಿಂದ ಹೊರಗುಳಿಯದಿರಲಿ ಎಂದು ವಠಾರ ಶಾಲೆ ಸ್ಥಾಪಿಸಲಾಗಿತ್ತು. ಜಿಲ್ಲೆಯ ಓಕಳಿ ಗ್ರಾಮದಲ್ಲಿ ಆರಂಭಗೊಂಡಿದ್ದ ವಠಾರ ಶಾಲೆ ಸದ್ಯ 31 ಸಾವಿರ ಗಡಿ ತಲುಪಿವೆ.
ಕಲಬುರಗಿ ವಿಭಾಗದ ಆರು ಜಿಲ್ಲೆಗಳಲ್ಲಿ ವಠಾರ ಶಾಲೆಗಳು ಪ್ರಾರಂಭವಾಗಿದ್ದು 700ಕ್ಕೂ ಅಧಿಕ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಗ್ರಾಮದ ಸಮುದಾಯ ಭವನ, ದೇವಸ್ಥಾನ, ಮರದ ಕೆಳಗೆ, ಮನೆ ಅಂಗಳ ಸೇರಿ ಹಲವೆಡೆ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಶಿಕ್ಷಕರ ಸಹಕಾರದಿಂದ ವಠಾರ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಶಿಕ್ಷಕರ ಈ ಅವಿಸ್ಮರಣೀಯ ಸೇವೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿದ್ದ ವಠಾರ ಶಾಲೆ ಯಶಸ್ವಿಯ ಹಾದಿ ಹಿಡಿದಿದೆ. ಈಗ ಆರಂಭಗೊಂಡ ಶಾಲೆ ಕಲಬುರಗಿ ವಿಭಾಗದ ಆರು ಜಿಲ್ಲೆಗಳಲ್ಲಿ ವಿಸ್ತರಣೆಗೊಂಡಿದೆ. ಮೊದಲು ಕಲಬುರಗಿಯಲ್ಲೇ ವಠಾರ ಶಾಲೆ ಆರಂಭವಾಗಿರೋದು ಗಮನಾರ್ಹ.
ಇದೀಗ ವಠಾರ ಶಾಲೆ ಆನ್‌ಲೈನ್ ಶಿಕ್ಷಣವನ್ನು ಮೀರಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರವಾಗಿದೆ. ಕೋವಿಡ್ ಮುಂಜಾಗ್ರತಾ ಕ್ರಮವಹಿಸಿ ವಠಾರ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಠಾರ ಶಾಲೆ ನಡೆಸಿದ್ರೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೂ ಬೋಧನೆ ಮಾಡಲಾಗುತ್ತಿದೆ. ಮಕ್ಕಳ ಕಲಿಕೆ ಜೊತೆಗೆ ಸಂವಿಧಾನದ ಅರಿವು ಮೂಡಿಸುವ ವಿನೂತನ ಪ್ರಯತ್ನ ವಠಾರ ಶಾಲೆಯಲ್ಲಿ ಮಾಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಸಕ್ರೇಪ್ಪಗೌಡ ತಿಳಿಸಿದ್ದಾರೆ.