ಸೇಡಂ: ದೀಪಾವಳಿ ಹಬ್ಬದ ಬೋನಸ್ ನೀಡುವಂತೆ ಆಗ್ರಹಿಸಿ ಕೇಸೋರಾಮ್ ಇಂಡಸ್ಟ್ರೀಸ್ನ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರು ಕೆಲಸ ಬಿಟ್ಟು ಪ್ರತಿಭಟನೆ ನಡೆಸಿದರು.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಕಳೆದ ವರ್ಷವೂ ಸಹ ನೀಡುವ ಸಂಬಳದಲ್ಲಿ ಅರ್ಧ ಸಂಬಳ ನೀಡಲಾಗಿದೆ. ಅಲ್ಲದೆ ದೀಪಾವಳಿ ಬೋನಸ್ ನೀಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಪರೋಕ್ಷವಾಗಿ ಉದ್ಯೋಗದಿಂದ ತೆಗೆದು ಹಾಕುವ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ವಾಸವದತ್ತಾ ಸಿಮೆಂಟ್ ಕಾರ್ಖಾನೆಯವರು ಸ್ಟಾಫ್ ಮತ್ತು ವರ್ಕರ್ಸ್ಗಳಿಗೆ ಒಂದು ನ್ಯಾಯ, ಗುತ್ತಿಗೆ ಕಾರ್ಮಿಕರು ಮತ್ತು ತಾತ್ಕಾಲಿಕ ನೌಕರರಿಗೆ ಒಂದು ನ್ಯಾಯ ಮಾಡುವ ಮೂಲಕ ಕಾರ್ಮಿಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು 700ಕ್ಕೂ ಅಧಿಕ ಕಾರ್ಮಿಕರು ಕಾರ್ಖಾನೆಯ ದುರಾಡಳಿತದ ವಿರುದ್ಧ ಕಿಡಿಕಾರಿದರು.
ನಂತರ ಕಾರ್ಮಿಕರ ಸಂಘದ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ ತೇಲ್ಕೂರ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಎರಡನೇ ಹಂತದ ಮಾತುಕತೆ ನಡೆಸಿ, ಜನವರಿವರೆಗೆ ಎರಡು ಕಂತುಗಳಲ್ಲಿ ಬೋನಸ್ ನೀಡಲು ಕಾರ್ಖಾನೆ ಒಪ್ಪಿಕೊಂಡಿರುವುದಾಗಿ ತಿಳಿಸಿದರು. ನಂತರ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.