ಕಲಬುರಗಿ: ಮಾಜಿ ಸಚಿವ, ಹಿರಿಯ ಹೋರಾಟಗಾರ ವೈಜನಾಥ ಪಾಟೀಲರ ಪಾರ್ಥಿವ ಶರೀರಕ್ಕೆ ಡಾ. ಚಂದ್ರಶೇಖರ ಕಂಬಾರ, ದಲಿತ ಕವಿ ಡಾ. ಸಿದ್ದಲಿಂಗಯ್ಯ, ಮಾಜಿ ಸಚಿವ ಎಸ್.ಕೆ.ಕಾಂತಾ, ಶಾಸಕ ಎಂ.ವೈ.ಪಾಟೀಲ, ಅಜಯಸಿಂಗ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಅಂತಿಮ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ವೈಜನಾಥ ಪಾಟೀಲ್ ಅವರು ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅವಿರತವಾಗಿ ದುಡಿದವರು. ಈ ಭಾಗಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ಸಾವಿನ ಸುದ್ದಿ ಆಘಾತವನ್ನುಂಟು ಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ಡಾ. ಸಿದ್ದಲಿಂಗಯ್ಯ, ವೈಜನಾಥ್ ಪಾಟೀಲ್ ಅವರು ಜನಪರ ನಾಯಕರಾಗಿದ್ದರು. ಬಡವರ, ಹಿಂದುಳಿದವರ ಬಗ್ಗೆ ಅಪಾರ ಕಾಳಜಿ ಉಳ್ಳವರು. ಅವರ ಆದರ್ಶಗಳು ನಮಗೆ ಸ್ಫೂರ್ತಿಯಾಗಿವೆ ಎಂದು ಕಂಬನಿ ಮಿಡಿದರು.
ಅಂತಿಮ ದರ್ಶನದ ನಂತರ ಪಾಟೀಲರ ಪಾರ್ಥೀವ ಶರೀರವನ್ನು ಚಿಂಚೋಳಿಗೆ ತೆಗೆದುಕೊಂಡು ಹೋಗಲಾಯಿತು. ನಾಳೆ ಸಂಜೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ನಂತರ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.