ಕಲಬುರಗಿ: ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಮೇಶ್ ಜಾಧವ್ ಸಚಿವರಾಗ್ತಾರೆ ಅಂದುಕೊಂಡಿದ್ದೆವು. ಆದ್ರೆ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಅನ್ನೋ ಒಂದೇ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಮಂತ್ರಿಯಾದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.
ಚಿಂಚೋಳಿ ಪಟ್ಟಣದ ಹಾರಕೂಡ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಇದ್ದಾರೆ ಎನ್ನೋ ಕಾರಣಕ್ಕೆ ಪ್ರೀಯಾಂಕ್ ಖರ್ಗೆಯನ್ನು ಮಂತ್ರಿ ಮಾಡಲಾಗಿದೆ. ವಯಸ್ಸಿನಲ್ಲಿ ದೊಡ್ಡವರಿದ್ದರು ಉಮೇಶ್ ಜಾಧವ್ ಅವರನ್ನು ಮಂತ್ರಿ ಮಾಡದೆ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು. ಮಂತ್ರಿಯಾದ ನಂತರ ಪ್ರಿಯಾಂಕ್ ಖರ್ಗೆಯ ದರ್ಪದ ಬರ್ತನೆಯಿಂದ ಬೇಸತ್ತು ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಜಾಧವ್ ಬಿಜೆಪಿ ಸೇರಿದ್ದಾರೆ. ಆದರೆ ದುಡ್ಡು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿ ಕಾಂಗ್ರೆಸ್ನವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಉಮೇಶ್ ಜಾಧವ್ ದೊಡ್ಡ ಶ್ರೀಮಂತರು, ದುಡ್ಡಿಗೆ ಮಾರಿಕೊಳ್ಳುವ ಅನಿವಾರ್ಯತೆ ಅವರಿಗಿಲ್ಲ. ಕಾಂಗ್ರೆಸ್ನವರು ವಿನಾ ಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಗುಡುಗಿದರು.