ಕಲಬುರಗಿ: ತಗ್ಗು ಗುಂಡಿಯಲ್ಲಿ ನಿಂತಿದ್ದ ಮಳೆ ನೀರಿಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ದಾರುಣ ಘಟನೆ ನಗರದ ದುಬೈ ಕಾಲೋನಿಯ ಕಲಬುರಗಿ ಕಲ್ಯಾಣ ಮಂಟಪದ ಬಳಿ ನಡೆದಿದೆ. ಅಭಿ (11) ಮತ್ತು ಅಜಯ್ (12) ಮೃತ ಬಾಲಕರು.
ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ 15 ಅಡಿ ಆಳದ ಗುಂಡಿ ತೋಡಲಾಗಿತ್ತು. ನಿರಂತರ ಮಳೆಯಿಂದ ತಗ್ಗುಗುಂಡಿ ಸಂಪೂರ್ಣ ಭರ್ತಿಯಾಗಿತ್ತು. ನಿನ್ನೆ (ಶನಿವಾರ) ಮಧ್ಯಾಹ್ನದಿಂದ ಈ ಇಬ್ಬರು ಬಾಲಕರು ನಾಪತ್ತೆಯಾಗಿದ್ದರು. ಆಟ ಆಡಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನಪ್ಪಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಚೌಕ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಯಿ-ಮಕ್ಕಳ ಆಸ್ಪತ್ರೆಗೆ ನೀರಿನ ಸೌಲಭ್ಯಕ್ಕಾಗಿ ಓವರ್ ಹೆಟ್ ಟ್ಯಾಂಕ್ ನಿರ್ಮಾಣ ಕಾಮಗಾರಿ ಮಾಡಲಾಗಿತ್ತು. ಆಸ್ಪತ್ರೆ ಮುಂಭಾಗದಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ಎಲ್ & ಟಿ ಕಂಪನಿಯಿಂದ ನಡೆಯುತ್ತಿತ್ತು. ಆದರೆ ಕಳೆದ ನಾಲ್ಕೈದು ತಿಂಗಳಿಂದ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಸ್ಥಗಿತವಾಗಿದೆ. ನಿರ್ಮಾಣ ಹಂತದ ಟ್ಯಾಂಕ್ ಕೆಳಭಾಗದಲ್ಲಿ ಮಳೆ ನೀರು ನಿಂತು ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಂಪನಿಯ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತೀಮಾ ಹಾಗೂ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಭೇಟಿ ನೀಡಿ ಮೃತ ಬಾಲಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಎಲ್ & ಟಿ ಕಂಪನಿ ಅಧಿಕಾರಿಗಳು ಸ್ಥಳಕ್ಕೆ ಬರಬೇಕು. ಬಾಲಕರ ಸಾವಿಗೆ ಪರಿಹಾರ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಗುಂಡಿಗೆ ಬಿದ್ದು ಬಾಲಕಿ ಸಾವು
ಪೊಲೀಸ್ ಕಮಿಷನರ್ ಪ್ರತಿಕ್ರಿಯೆ: "ಅಭಿ ಮತ್ತು ಅಜಯ್ ನಿನ್ನೆ ಸಾಯಂಕಾಲ 5 ಗಂಟೆಯ ಸುಮಾರಿಗೆ ಆಟವಾಡುತ್ತ ತಮ್ಮ ಮನೆಯಿಂದ ಹೊರಗೆ ಹೋಗಿದ್ದರು. ರಾತ್ರಿಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ಎಲ್ಲ ಕಡೆಗೂ ಹುಡುಕಾಡಿದ್ದಾರೆ. ಬಳಿಕ ವಿಷಯಕ್ಕೆ ಸಂಬಂಧಿಸಿದಂತೆ ಚೌಕ್ ಪೊಲೀಸ್ ಠಾಣೆಗೆ ತೆರಳಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಚೌಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ದುಬೈ ಕಾಲೋನಿಯ ಹತ್ತಿರವಿರುವ ಆಸ್ಪತ್ರೆ ಮುಂದೆ ನೀರಿನ ಟ್ಯಾಂಕ್ ನಿರ್ಮಿಸಲು ತೋಡಿದ್ದ ಗುಂಡಿಯಲ್ಲಿ ಮೇಲ್ಕಂಡ ಹುಡುಗರ ಶವ ಇಂದು ಬಳ್ಳಿಗೆ ಪತ್ತೆಯಾಗಿದೆ. ಶವ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ"- ಪೊಲೀಸ್ ಕಮಿಷನರ್ ಚೇತನ್. ಆರ್.
ಇದನ್ನೂ ಓದಿ: ಕೊಪ್ಪಳ : ಜೆಜೆಎಂ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು